ವಿಶೇಷಚೇತನ ವ್ಯಕ್ತಿಗಳ ಅಂ.ರಾಷ್ಟ್ರೀಯ ದಿನ: 33 ವ್ಯಕ್ತಿಗಳು, ಸಂಸ್ಥೆಗಳಿಗೆ ರಾಷ್ಟ್ರಪತಿಯಿಂದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Update: 2024-12-04 06:46 GMT

ಹೊಸದಿಲ್ಲಿ: ವಿಶೇಷಚೇತನ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶೇಷಚೇತನ ವ್ಯಕ್ತಿಗಳ ಸಬಲೀಕರಣಕ್ಕಾಗಿ ಅನುಕರಣೀಯ ಸೇವೆ ಸಲ್ಲಿಸುತ್ತಿರುವ 33 ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

 ಡಿ.3ರಂದು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಶೇಷಚೇತನರ ಧೈರ್ಯ ಮತ್ತು ದೃಢತೆಯನ್ನು ಶ್ಲಾಘಿಸಿದರು. ಇಂತಹವರು ಸಮಾಜಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಗಳು ಕೇವಲ ಪ್ರಶಸ್ತಿ ಪುರಸ್ಕೃತರ ಸಾಧನೆಗಳನ್ನು ಗೌರವಿಸಿ ಕೊಂಡಾಡುವುದಲ್ಲದೆ ಸಮಾಜಕ್ಕೆ ಪ್ರೇರಣೆಯಾಗಿ ಕೂಡ ಕಾರ್ಯನಿರ್ವಹಿಸುತ್ತವೆ. ಇದರ ಜೊತೆಗೆ, ವಿಶೇಷಚೇತನರಲ್ಲಿ ಉದ್ಯಮಶೀಲತೆ, ಕೌಶಲ್ಯ ಅಭಿವೃದ್ಧಿ ಮತ್ತು ನಾಯಕತ್ವವನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದರು.

2024ರ ವಿಶೇಷಚೇತನರ ಒಲಿಂಪಿಕ್ಸ್ (ಪ್ಯಾರಾಲಿಂಪಿಕ್ಸ್) ನಲ್ಲಿ ಭಾರತದ ಸಾಧನೆಯನ್ನು ಪ್ರಶಂಸಿಸಿದ ರಾಷ್ಟ್ರಪತಿ, 2012ರಲ್ಲಿ ಭಾರತವು ಕೇವಲ ಒಂದು ಪದಕವನ್ನು ಪಡೆದುಕೊಂಡಿದ್ದರೆ, ಈ ವರ್ಷ ನಡೆದ ಪ್ಯಾರಿಸ್ ವಿಶೇಷಚೇತನರ ಒಲಿಂಪಿಕ್ಸ್ (ಪ್ಯಾರಾಲಿಂಪಿಕ್ಸ್) ನಲ್ಲಿ ಭಾರತೀಯ ಕ್ರೀಡಾಪಟುಗಳು ಮಹತ್ವಪೂರ್ಣ 29 ಪದಕಗಳನ್ನು ಗೆದ್ದಿದ್ದಾರೆ. ನಾವು ವಿಶೇಷಚೇತನರಿಗೆ ಸಮಾನ ಅವಕಾಶಗಳು ಮತ್ತು ಅಂತರ್ಗತ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನ, ಹೆಚ್ಚಿದ ಅರಿವು ಮತ್ತು ಉತ್ತಮ ಬೆಂಬಲವು ಈ ಯಶಸ್ಸಿಗೆ ಕಾರಣವಾಗಿದೆ ಎಂದರು.

ಅಕ್ಸೆಸ್ಸಿಬಲ್ ಇಂಡಿಯಾ ಅಭಿಯಾನ ಮತ್ತು ವಿಶೇಷಚೇತನರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ವಿವಿಧ ಸಚಿವಾಲಯಗಳು ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸಿದ ರಾಷ್ಟ್ರಪತಿ, ರಾಷ್ಟ್ರಪತಿ ಭವನದ ಜಾಲತಾಣವನ್ನು ವಿಶೇಷಚೇತನರಿಗೆ ಅನುಕೂಲಕರ ವ್ಯವಸ್ಥೆಯನ್ನು ಅಂತರ್ಗತವಾಗಿರುವ ದೇಶದ ಮೊದಲ ಜಾಲತಾಣವಾಗಿ ಅಭಿವೃದ್ಧಿಪಡಿಸಲಾಗಿದೆ. ಜಿ.ಐ.ಜಿ.ಡಬ್ಲ್ಯು3 ಮಾನದಂಡಗಳಿಗೆ ಬದ್ಧವಾಗಿದೆ ಮತ್ತು ದೃಷ್ಟಿಹೀನ ವಿಶೇಷಚೇತನ ವ್ಯಕ್ತಿಗಳಿಗೆ ಕೂಡ ಸುಲಭವಾಗಿ ಬಳಸಬಹುದಾಗಿದೆ" ಎಂದು ತಿಳಿಸಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ್ ಮಾತನಾಡಿ, ವಿಶೇಷಚೇತನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಬಲೀಕರಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಅಚಲ ಬದ್ಧತೆಯನ್ನು ಹೊಂದಿದೆ ಎಂದರು. 

ಭಾರತೀಯ ಸಂಕೇತ ಭಾಷೆಯ ಪ್ರಚಾರ, ಸಹಾಯಕ ಸಾಧನಗಳ ವಿತರಣೆ ಮತ್ತು ವಿಶೇಷಚೇತನ ವ್ಯಕ್ತಿಗಳ ಜೀವನವನ್ನು ಗಣನೀಯವಾಗಿ ಸುಧಾರಿಸಿದ ಕ್ರಮಗಳಂತಹ ಇತರ ಹಲವಾರು ವಿಷಯಗಳಲ್ಲಿ ಆಗಿರುವ ಪರಿಣಾಮಕಾರಿ ಬದಲಾವಣೆಗಳು ಹಾಗೂ ಅನುಷ್ಟಾನಗೊಂಡಿರುವ ಉಪಕ್ರಮಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಪ್ರಶಸ್ತಿ ಪುರಸ್ಕೃತರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತ ಎಂಬ ಪ್ರಧಾನಿಯ ದೃಷ್ಟಿಕೋನದ ಸಂಕಲ್ಪ ಹಾಗೂ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ವಿಶೇಷಚೇತನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯ (ಡಿಇಪಿಡಬ್ಲ್ಯುಡಿ) ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮಾತನಾಡಿ, ವಿಶೇಷಚೇತನ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಇಲಾಖೆಯ ಬದ್ಧತೆಯನ್ನು ಪುನರುಚ್ಚರಿಸಿದರು. ವಿಶೇಷಚೇತನರಿಗೆ ಸಮಗ್ರ ಬೆಂಬಲ ನೀಡಲು ಸಧ್ಯದಲ್ಲೇ ದೇಶಾದ್ಯಂತ 'ಪ್ರಧಾನಮಂತ್ರಿ ದಿವ್ಯಶಾಖೆ' ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಿದರು.

ವಿಶೇಷಚೇತನ ಸೇವೆಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಪುರಸ್ಕೃತರಾದ 33 ವ್ಯಕ್ತಿಗಳು ಮತ್ತು ಸಂಸ್ಥೆಗಳು ಹಾಗೂ, ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿದ್ದ 13 ವರ್ಷದ ಪ್ರಥಮೇಶ್ ಮತ್ತು ಜಾನ್ಹವಿಯಂತಹ ಯುವ ಸಾಧಕರು ಮತ್ತು ಇವರ ಜೊತೆಗೆ 75 ವರ್ಷದ ಸರೋಜ್ ಆರ್ಯ ಅವರಂತಹ ಹಿರಿಯ ನಾಗರಿಕರು ಸೇರಿದಂತೆ ವಿವಿಧ ವರ್ಗದ ಎಲ್ಲ ಸಾಧಕರ ಪ್ರತಿಭೆ ಮತ್ತು ಸಮರ್ಪಣೆಗಳನ್ನು ರಾಜೇಶ್ ಅಗರ್ವಾಲ್ ಪರಿಚಯಿಸಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ವಿಕಲಚೇತನ ವಿದ್ಯಾರ್ಥಿಗಳು, ಪ್ರಶಸ್ತಿ ಪುರಸ್ಕೃತರ ಕುಟುಂಬದ ಸದಸ್ಯರು, ಹಿರಿಯ ರಾಜತಾಂತ್ರಿಕರು, ಉದ್ಯಮ ಪಾಲುದಾರರು, ಇತರೆ ಗಣ್ಯರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News