ಫಡ್ನವೀಸ್ ಜತೆ ಮಹತ್ವದ ಭೇಟಿ; ಡಿಸಿಎಂ ಹುದ್ದೆಗೆ ಒಪ್ಪಿಕೊಂಡ ಶಿಂಧೆ: ವರದಿ

Update: 2024-12-04 03:55 GMT

ಮುಂಬೈ: ಹಂಗಾಮಿ ಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖಂಡ ಏಕನಾಥ್ ಶಿಂಧೆ ಅವರನ್ನು ಮಂಗಳವಾರ ಸಂಜೆ ಅಧಿಕೃತ ನಿವಾಸ ವರ್ಷಾದಲ್ಲಿ ಭೇಟಿ ಮಾಡಿದ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಅಧಿಕಾರ ಹಂಚಿಕೆ ಮಾತುಕತೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಇದರಿಂದ ಮಹಾರಾಷ್ಟ್ರದಲ್ಲಿ ಹಲವು ದಿನಗಳಿಂದ ಇದ್ದ ರಾಜಕೀಯ ಅನಿಶ್ಚಿತತೆ ದೂರವಾಗಲಿದೆ. ಮಹಾಯುತಿ ಕೂಟದ ಮುಖ್ಯಮಂತ್ರಿಯಾಗಿ ಫಡ್ನವೀಸ್ ಗುರುವಾರ ಅಧಿಕಾರ ವಹಿಸಿಕೊಳ್ಳಲಿದ್ದು, ಇಬ್ಬರು ಉಪಮುಖ್ಯಮಂತ್ರಿಗಳ ಪೈಕಿ ಒಬ್ಬರಾಗಿ ಶಿಂಧೆ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಶಿವಸೇನೆ ಮೂಲಗಳು ಹೇಳಿವೆ.

ಕೇಂದ್ರ ಸಚಿವ ಅಮಿತ್ ಶಾ ಜತೆಗಿನ ಭೇಟಿಗಾಗಿ ದಿಲ್ಲಿಗೆ ತೆರಳಿದ ಆರು ದಿನಗಳ ಬಳಿಕ ಉಭಯ ಮುಖಂಡರು ಪರಸ್ಪರ ಮುಖತಃ ಭೇಟಿಯಾದರು. ಶಿವಸೇನೆ ಸರಕಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಶಿಂಧೆಯವರ ಮನವೊಲಿಸುವ ಸಲುವಾಗಿ ಫಡ್ನವೀಸ್ ಅಧಿಕೃತ ನಿವಾಸಕ್ಕೆ ತೆರಳಿದ್ದರು.

ಬಿಜೆಪಿಯ ಕೇಂದ್ರ ವೀಕ್ಷಕರಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ನ ಮಾಜಿ ಸಿಎಂ ವಿಜಯ ರುಪಾನಿ ಇಂದು (ಡಿ.4) ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಳಿಕ ಶಿಂಧೆಯವರನ್ನು ಭೇಟಿ ಮಾಡುವರು. ಅವರ ಸಮ್ಮುಖದಲ್ಲಿ ಅಧಿಕಾರ ಹಂಚಿಕೆಯ ಅಂತಿಮ ಸೂತ್ರವನ್ನು ಚರ್ಚಿಸಲಾಗುವುದು ಎಂದು ಶಿವಸೇನೆ ಮೂಲಗಳು ಹೇಳಿವೆ. ನಿಯೋಜಿತ ಸಿಎಂ ಹಾಗೂ ಇಬ್ಬರು ಡಿಸಿಎಂಗಳು ರಾಜ್ಯಪಾಲರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.

ಮೂವರು ಮುಖಂಡರು ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಇಂದು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡಿಸುವರು. ಗುರುವಾರ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇವಲ ಮುಖ್ಯಮಂತ್ರಿ ಹಾಗೂ ಇಬ್ಬರು ಉಪಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವರು. ಅಧಿಕಾರ ಹಂಚಿಕೆ ಸೂತ್ರ ಅಂತಿಮವಾದ ಬಳಿಕ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರಲಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News