ಮೃತ ಯೋಧನ ಪತ್ನಿಗೆ ಪಿಂಚಣಿ ನೀಡುವ ಆದೇಶ ಪ್ರಶ್ನಿಸಿದ್ದಕ್ಕೆ ಕೇಂದ್ರಕ್ಕೆ 50,000ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

Update: 2024-12-04 05:37 GMT

ಹೊಸದಿಲ್ಲಿ: 2013ರಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕರ್ತವ್ಯದಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಸೇನಾ ಯೋಧನ ಪತ್ನಿಗೆ “ಉದಾರೀಕೃತ ಕುಟುಂಬ ಪಿಂಚಣಿ”(Liberalised Family Pension)(LFP) ಮಂಜೂರು ಬಗ್ಗೆ ಪ್ರಶ್ನಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ 50,000ರೂ. ದಂಡ ವಿಧಿಸಿದೆ.

ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ವಿಧವೆಯ ಬಗ್ಗೆ ಯಾವುದೇ ಸಹಾನುಭೂತಿ ತೋರಿಸದೆ ಪ್ರಕರಣವನ್ನು ಉನ್ನತ ನ್ಯಾಯಾಲಯದವರೆಗೆ ಎಳೆದೊಯ್ದ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ 50,000ರೂ. ದಂಡವನ್ನು ವಿಧಿಸಿದೆ. ದಂಡದ ಮೊತ್ತವನ್ನು ಮೃತ ಯೋಧನ ವಿಧವೆಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

2013ರ ಜನವರಿಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ತೀವ್ರವಾದ ಹವಾಮಾನ ಪರಿಸ್ಥಿತಿಗಳಿಂದ ಕರ್ತವ್ಯದಲ್ಲಿದ್ದ ಯೋಧ ಉಸಿರಾಟದ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಪರೀಕ್ಷಿಸಿ ಯೋಧನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಯೋಧನನ್ನು ತಕ್ಷಣಕ್ಕೆ ಏರ್ ಲಿಫ್ಟ್ ಮಾಡಲು ಸಾಧ್ಯವಾಗಿಲ್ಲ. ಅವರನ್ನು ಕಾಲ್ನಡಿಗೆಯಲ್ಲೇ ಸಾಗಿಸಲಾಗಿದೆ. ಆದರೆ ಹತ್ತಿರದ ವೈದ್ಯಕೀಯ ತಪಾಸಣಾ ಕೊಠಡಿಗೆ ಕೊಂಡೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು.

ಮೃತ ಯೋಧನ ಪತ್ನಿಗೆ ವಿಶೇಷ ಕುಟುಂಬ ಪಿಂಚಣಿ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ನೀಡಲಾಗಿದೆ. ಆದರೆ ಆಕೆಗೆ ʼಉದಾರೀಕೃತ ಕುಟುಂಬ ಪಿಂಚಣಿʼ (LFP) ನೀಡಲಾಗಿಲ್ಲ. ಇದರಿಂದಾಗಿ ಅವರು ಸಶಸ್ತ್ರ ಪಡೆಗಳ ನ್ಯಾಯಮಂಡಳಿ(ಎಎಫ್ಟಿ) ಮೊರೆ ಹೋಗಿದ್ದರು. ಅಂತಿಮವಾಗಿ ಅವರ ಪರವಾಗಿ ನ್ಯಾಯಮಂಡಳಿ ತೀರ್ಪು ನೀಡಿತ್ತು.

ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ʼಯುದ್ಧದ ವೇಳಿನ ಸಾವುʼ ಅಥವಾ 'ದೈಹಿಕ ಕಾರಣದ ಸಾವು' ಇದರಲ್ಲಿ ಯಾವ ಕಾರಣದಿಂದ ಯೋಧ ಮೃತಪಟ್ಟಿದ್ದಾನೆ ಎಂಬ ಪ್ರಶ್ನೆ ಮೂಡಿತ್ತು. ಕರ್ತವ್ಯದಲ್ಲಿರುವಾಗ ಹವಾಮಾನ ವೈಪರೀತ್ಯದಿಂದ ಮೃತಪಟ್ಟ ಕಾರಣ ಮೃತ ಸೈನಿಕನ ಪ್ರಕರಣವು 'ಯುದ್ಧದ ಬಲಿಪಶು' ಎಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.

ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿ ವಾದ ಮಂಡಿಸಿದ್ದರು. ಮೃತ ಯೋಧನ ವಿಧವೆ ಪರ ಹಿರಿಯ ವಕೀಲ ಕೆ.ಪರಮೇಶ್ವರ್ ವಾದ ಮಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News