ಸಂಜಯ್ ಸಿಂಗ್ ರನ್ನು ಸಂಸತ್ ಗೆ ಕರೆದೊಯ್ಯುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶ

Update: 2024-03-18 15:27 GMT

 ಸಂಜಯ್ ಸಿಂಗ್ | Photo: PTI 

ಹೊಸದಿಲ್ಲಿ: ರಾಜ್ಯ ಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಅವರನ್ನು ಮಂಗಳವಾರ ಸಂಸತ್ತಿಗೆ ಕರೆದೊಯ್ಯುವಂತೆ ದಿಲ್ಲಿ ನ್ಯಾಯಾಲಯ ತಿಹಾರ್ ಜೈಲಿನ ಅಧಿಕಾರಿಗಳಿಗೆ ತಿಳಿಸಿದ್ದಾರೆ

ಸಿಂಗ್ ಅವರನ್ನು ಕರೆದೊಯ್ಯುವ ಸಂದರ್ಭ ಸಾಕಷ್ಟು ಭದ್ರತೆಯ ಖಾತರಿ ನೀಡುವಂತೆ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರು ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿದ್ದಾರೆ.

‘‘ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಸಂಜಯ್ ಸಿಂಗ್ ಅವರನ್ನು ಸಾಕಷ್ಟು ಭದ್ರತೆಯಲ್ಲಿ 19.03.2024ರಂದು ಸಂಸತ್ತಿಗೆ ಕರೆದೊಯ್ಯುವಂತೆ ಹಾಗೂ ಪ್ರಮಾಣ ವಚನ ಸ್ವೀಕಾರದ ಬಳಿಕ ಅವರನ್ನು ಸುರಕ್ಷಿತವಾಗಿ ಕಾರಾಗೃಹಕ್ಕೆ ಹಿಂದೆ ಕರೆ ತರುವಂತೆ ಸಂಬಂಧಿತ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಲಾಗಿದೆ’’ ಎಂದು ನ್ಯಾಯಮೂರ್ತಿ ತಿಳಿಸಿದರು.

ಮಾರ್ಚ್ 16ರಂದು ಜಾರಿಗೊಳಿಸಲಾದ ಆದೇಶದಲ್ಲಿ ನ್ಯಾಯಮೂರ್ತಿ, ಸಂಸತ್ತಿಗೆ ಆಗಮಿಸುವ ಸಂದರ್ಭ ಸಂಜಯ್ ಸಿಂಗ್ ಅವರು ಮೊಬೈಲ್ ಬಳಸಲು ಹಾಗೂ ಪ್ರಕರಣದ ಇತರ ಯಾವುದೇ ಆರೋಪಿ, ಶಂಕಿತರು ಹಾಗೂ ಸಾಕ್ಷಿಗಳೊಂದಿಗೆ ಮಾತನಾಡಲು ಅನುಮತಿ ನೀಡಬಾರದು ಎಂದು ಹೇಳಲಾಗಿದೆ.

ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲು ಅಥವಾ ಯಾವುದೇ ಸಾರ್ವಜನಿಕ ಸಭೆ ನಡೆಸಲು ಕೂಡ ಅನುಮತಿ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿ ನಾಗಪಾಲ್ ಅವರು ತಿಳಿಸಿದರು.

ಆದರೆ, ಅವರು ಈ ಭೇಟಿಯ ಸಂದರ್ಭ ತನ್ನ ವಕೀಲರು ಹಾಗೂ ಕುಟುಂಬದ ಸದಸ್ಯರನ್ನು ಭೇಟಿಯಾಗಬಹುದು ಎಂದು ಅವರು ತಿಳಿಸಿದ್ದಾರೆ.

ಈಗ ರದ್ದುಗೊಳಿಸಲಾಗಿರುವ ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರು ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದರು. ಪ್ರಸಕ್ತ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News