ನ್ಯಾಯಾಲಯಗಳು ಮನಬಂದಂತೆ ಸರಕಾರಿ ಅಧಿಕಾರಿಗಳಿಗೆ ಸಮನ್ಸ್ ನೀಡುವುದು ಸಂವಿಧಾನಕ್ಕೆ ವಿರುದ್ಧ : ಸುಪ್ರೀಂ ಕೋರ್ಟ್
ಹೊಸದಿಲ್ಲಿ : ನ್ಯಾಯಾಂಗ ಕಲಾಪಗಳಲ್ಲಿ ಸರಕಾರಿ ಅಧಿಕಾರಿಗಳಿಗೆ ಮನಬಂದಂತೆ ಸಮನ್ಸ್ ಹೊರಡಿಸುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಬುಧವಾರ ಎತ್ತಿಹಿಡಿದ ಸರ್ವೋಚ್ಛ ನ್ಯಾಯಾಲಯವು, ಈ ಕುರಿತು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ)ಗಳನ್ನು ರೂಪಿಸಿತು.
ನ್ಯಾಯಾಲಯಗಳಿಗಾಗಿ ರೂಪಿಸಿರುವ ಎಸ್ಒಪಿಗಳಲ್ಲಿ ಸರಕಾರಿ ಅಧಿಕಾರಿಗಳಿಗೆ ಮನಬಂದಂತೆ ಸಮನ್ಸ್ ಹೊರಡಿಸುವುದರಿಂದ ಅವು ದೂರವಿರಬೇಕು ಎಂದು ಒತ್ತಿ ಹೇಳಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೊಳಗೊಂಡ ಪೀಠವು ತಿಳಿಸಿತು.
ತೀರ್ಪನ್ನು ಪ್ರಕಟಿಸಿದ ನ್ಯಾ.ಚಂದ್ರಚೂಡ್ ಅವರು, ಓರ್ವ ಅಧಿಕಾರಿಯ ದೃಷ್ಟಿಕೋನವು ನ್ಯಾಯಾಲಯಕ್ಕಿಂತ ಭಿನ್ನವಾಗಿದೆ ಎಂಬ ಕಾರಣಕ್ಕಾಗಿಯೇ ಅವರನ್ನು ನ್ಯಾಯಾಲಯಕ್ಕೆ ಕರೆಸುವಂತಿಲ್ಲ ಎಂದು ಹೇಳಿದರು.
ಕಲಾಪಗಳ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ಅವಹೇಳನ ಟೀಕೆ ಟಿಪ್ಪಣಿಗಳನ್ನು ಮಾಡುವುದರಿಂದ ನ್ಯಾಯಾಲಯಗಳು ದೂರವಿರಬೇಕು ಎಂದೂ ಸರ್ವೋಚ್ಛ ನ್ಯಾಯಾಲಯವು ಹೇಳಿತು.
ಉತ್ತರ ಪ್ರದೇಶ ಹಣಕಾಸು ಇಲಾಖೆಯ ಇಬ್ಬರು ಕಾರ್ಯದರ್ಶಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಕಾರಣವಾಗಿದ್ದ ಅಲಹಾಬಾದ್ ಉಚ್ಛ ನ್ಯಾಯಾಲಯದ ಆದೇಶಗಳನ್ನು ಸರ್ವೋಚ್ಛ ನ್ಯಾಯಾಲಯವು ತಳ್ಳಿಹಾಕಿತು.