ವಿಚಾರಣೆ ವೇಳೆ ನ್ಯಾಯಾಲಯಗಳು ಟೇಪ್ ರೆಕಾರ್ಡರ್ಗಳಂತೆ ವರ್ತಿಸಬಾರದು : ಸುಪ್ರೀಂಕೋರ್ಟ್

Update: 2024-05-05 18:05 GMT

ಸುಪ್ರೀಂಕೋರ್ಟ್ | PC ; PTI  

ಹೊಸದಿಲ್ಲಿ : ನ್ಯಾಯಾಲಯಗಳು ವಿಚಾರಣೆಯ ಸಂದರ್ಭ ಸಕ್ರಿಯವಾಗಿ ಪಾಲ್ಗೊಳ್ಳಬೇಕೇ ಹೊರತು ಕೇವಲ ಟೇಪ್ ರಿಕಾರ್ಡರ್ಗಳಂತೆ ವರ್ತಿಸಕೂಡದು ಎಂದು ಸುಪ್ರೀಂಕೋರ್ಟ್ ಕಿವಿಮಾತು ಹೇಳಿದೆ.

ನ್ಯಾಯಾಧೀಶರು ವಿಚಾರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ಸಾಕ್ಷಿಗಳಿಂದ ಅಗತ್ಯವಿರುವ ವಿಷಯಗಳನ್ನು ಸಮರ್ಪಕ ಗ್ರಹಿಕೆಯೊಂದಿಗೆ ಪಡೆದುಕೊಳ್ಳಬೇಕಾಗಿದೆ. ಪ್ರಕರಣದ ಕುರಿತು ಸೂಕ್ತ ತೀರ್ಮಾ ನಕ್ಕೆ ಬರಲು ಇದು ಅತ್ಯಂತ ಅಗತ್ಯವೆಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ ಹೇಳಿದೆ.

‘‘ನ್ಯಾಯಾಧೀಶರು ನ್ಯಾಯಾಲಯದ ಕಲಾಪಗಳ ಮೇಲೆ ಕಣ್ಗಾವಲಿರಿಸಬೇಕಾಗುತ್ತದೆ. ಒಂದು ವೇಳೆ ಪ್ರಾಸಿಕ್ಯೂಟರ್ ಅಜಾಗರೂಕ ಅಥವಾ ಜಡತ್ವವನ್ನು ಹೊಂದಿದಲ್ಲಿ ನ್ಯಾಯಾಲಯವು ಕಲಾಪಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಇದರಿಂದ ಸತ್ಯ ಬೆಳಕಿಗೆ ಬರುತ್ತದೆ ಎಂದು ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಹೇಳಿದರು.

ಕ್ರಿಮಿನಲ್ ಅರ್ಜಿಗಳ ಆಲಿಕೆಯ ಸಂದರ್ಭದಲ್ಲಿ ಯಾವುದೇ ಪ್ರತಿಕೂಲ ಸಾಕ್ಷಿಗಳನ್ನು ಪಬ್ಲಿಕ್ ಪ್ರಾಸಿಕ್ಯೂಟರ್ಗಳು ಪರಿಣಾಮಕಾರಿಯಾಗಿ ಹಾಗೂ ಅರ್ಥಗರ್ಭಿತವಾಗಿ ಪಾಟಿಸವಾಲಿಗೊಳಪಡಿಸುವ ಪರಿಪಾಠ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಅಭಿಯೋಜಕ (ಪ್ರಾಸಿಕ್ಯೂಶನ್)ಸೇವೆ ಹಾಗೂ ನ್ಯಾಯಾಂಗದ ನಡುವಿನ ಬಾಂಧವ್ಯಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ತಳಹದಿಯಾಗಿವೆ ಎಂದು ಸಿಜೆಐ ತಿಳಿಸಿದರು. ಸಾರ್ವಜನಿಕ ಅಭಿಯೋಜಕರ ಹುದ್ದೆಯ ನೇಮಕಾತಿಯಲ್ಲಿ ರಾಜಕೀಯ ಪರಿಗಣನೆ ಇರಕೂಡದೆಂದು ಅವರು ಹೇಳಿದರು.

1995ರಲ್ಲಿ ಪತ್ನಿಯನ್ನು ಹತ್ಯೆಗೈದ ಪ್ರಕರಣದ ಆರೋಪಿಯ ದೋಷಿತ್ವ ಎತ್ತಿಹಿಡಿದು, ಆತನಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿ ಶನಿವಾರ ತೀರ್ಪು ನೀಡಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನು ಕೂಡಾ ಒಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾರ್ವಜನಿಕ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ವ್ಯವಸ್ಥೆಯಿಂದ ಗಂಭೀರವಾದ ಮೋಸ ಅಥವಾ ಕರ್ತವ್ಯ ಲೋಪಗಳು ನಡೆಯದಂತೆ ನ್ಯಾಯಾಲಯವು ಜಾಗರೂಕವಾಗಿರಬೇಕೆಂದು ನ್ಯಾಯಪೀಠ ಸಲಹೆ ನೀಡಿತು.

ಸಾರ್ವಜನಿಕ ಅಭಿಯೋಜಕರಂತಹ ಹುದ್ದೆಗಳಿಗೆ ನೇಮಕಗೊಳಿಸುವಾಗ ಸರಕಾರವು ವ್ಯಕ್ತಿಯ ಅರ್ಹತೆ ಮಾತ್ರವೇ ಮಾನದಂಡವಾಗಬೇಕೆಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತು.

ವ್ಯಕ್ತಿಯು ಪ್ರತಿಭಾವಂತನಾಗಿರಬೇಕು ಮಾತ್ರವಲ್ಲದೆ ನಿಷ್ಕಳಂಕ ಚಾರಿತ್ರ್ಯ ಹಾಗೂ ಪ್ರಾಮಾಣಿಕತೆಯನ್ನು ಹೊಂದಿರಬೇಕು. ಯಾವುದೇ ಪೂರ್ವಾಗ್ರಹ, ನಿರ್ದೇಶಿಲ್ಪಡುವಿಕೆ ಅಥವಾ ಮತ್ತಿತರ ಅಡೆತಡೆಗಳಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶಕ್ತನಾಗಿರಬೇಕು ಎಂದು ನ್ಯಾಯಪೀಠ ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News