ನ್ಯಾಯಾಲಯಗಳು ತೀರ್ಪುಗಳಲ್ಲಿ ಆರೋಪಿಗಳ ಜಾತಿ, ಧರ್ಮವನ್ನು ಉಲ್ಲೇಖಿಸಬಾರದು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ನ್ಯಾಯಾಲಯಗಳು ತಮ್ಮ ತೀರ್ಪುಗಳಲ್ಲಿ ದಾವೆದಾರರ ಜಾತಿ ಅಥವಾ ಧರ್ಮವನ್ನು ಯಾವತ್ತೂ ಉಲ್ಲೇಖಿಸಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಐದು ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣವೊಂದರಲ್ಲಿ ದೋಷಿಯಾಗಿರುವ ಗೌತಮ್ ಎಂಬ ವ್ಯಕ್ತಿಯ ಶಿಕ್ಷೆಯನ್ನು ಕಡಿತಗೊಳಿಸಿ ಇತ್ತೀಚೆಗೆ ರಾಜಸ್ಥಾನ ಹೈಕೋರ್ಟ್ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ರಾಜಸ್ಥಾನ ಸರಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಈ ತೀರ್ಪು ನೀಡಿದೆ.
ರಾಜಸ್ಥಾನ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪುಗಳಲ್ಲಿ ದೋಷಿಯ ಜಾತಿಯನ್ನು ಯಾಕೆ ಉಲ್ಲೇಖಿಸಲಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು.
‘‘ನ್ಯಾಯಾಲಯವು ಪ್ರಕರಣವೊಂದರ ವಿಚಾರಣೆ ನಡೆಸುವಾಗ ಆರೋಪಿಗೆ ಯಾವುದೇ ಜಾತಿ ಅಥವಾ ಧರ್ಮ ಇರುವುದಿಲ್ಲ’’ ಎಂದು ಸುಪ್ರೀಂ ಕೋರ್ಟ್ ಹೇಳಿತು. ‘‘ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ತೀರ್ಪುಗಳಲ್ಲಿ ಆರೋಪಿಯ ಜಾತಿಯನ್ನು ಯಾಕೆ ಉಲ್ಲೇಖಿಸಲಾಗಿದೆ ಎನ್ನುವುದು ನಮಗೆ ಅರ್ಥವಾಗುವುದಿಲ್ಲ’’ ಎಂದು ಅದು ಹೇಳಿತು.
ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದ ಬಳಿಕ, ತೀರ್ಪಿನಿಂದ ಜಾತಿಯನ್ನು ತೆಗೆದುಹಾಕಲು ಅದಕ್ಕೆ ತಿದ್ದುಪಡಿ ತರಲಾಗುವುದು ಎಂದು ನ್ಯಾಯಪೀಠ ಹೇಳಿತು.
ವಿಚಾರಣಾ ನ್ಯಾಯಾಲಯವು ದೋಷಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಹೈಕೋರ್ಟ್ ಶಿಕ್ಷೆಯನ್ನು 12 ವರ್ಷಗಳಿಗೆ ಇಳಿಸಿತ್ತು. ಆರೋಪಿಯು ಚಿಕ್ಕ ಪ್ರಾಯದವನಾಗಿದ್ದು ಬಡ ಪರಿಶಿಷ್ಟ ಜಾತಿ ಕುಟುಂಬವೊಂದಕ್ಕೆ ಸೇರಿದ್ದಾನೆ ಹಾಗೂ ಅವನು ಅಪರಾಧ ಪ್ರವೃತ್ತಿಯವನಲ್ಲ ಎಂಬ ಅಂಶಗಳನ್ನು ಪರಿಗಣಿಸಿ ಹೈಕೋರ್ಟ್ ಆತನ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿತ್ತು.
ಆದರೆ, ಇಂಥ ಪ್ರಕರಣಗಳಲ್ಲಿ ಜಾತಿಯ ಕಾರಣಕ್ಕಾಗಿ ಆರೋಪಿಗಳಿಗೆ ದಯೆ ತೋರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ಆರೋಪಿಯು ಅಪರಾಧ ಪ್ರವೃತ್ತಿಯವನಲ್ಲದಿರುವುದು ಇಲ್ಲಿ ಅಪ್ರಸ್ತುತ ಎಂದು ಅದು ಅಭಿಪ್ರಾಯಪಟ್ಟಿತು.
ಆದರೂ, ಅಪರಾಧ ಎಸಗಿದ ಸಮಯದಲ್ಲಿ ಆರೋಪಿಗೆ ಕೇವಲ 22 ವರ್ಷ ಪ್ರಾಯ ಮತ್ತು 2014ರಿಂದ ನ್ಯಾಯಾಲಯದಲ್ಲಿದ್ದಾನೆ ಎಂಬುದನ್ನು ಪರಿಗಣಿಸಿ ದೋಷಿಗೆ 14 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿತು.