ಅಪರಾಧ ಹಿನ್ನಲೆಯೊಂದೇ ಮರಣ ದಂಡನೆಗೆ ಆಧಾರವಾಗುವುದಿಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: 2003ರಲ್ಲಿ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದ್ದ ರಾಜಕೀಯ ಹತ್ಯೆಯ ಸಂಬಂಧ ಮರಣ ದಂಡನೆಗೆ ಗುರಿಯಾಗಿದ್ದ ಅಪರಾಧಿಯೊಬ್ಬರ ಪ್ರಕರಣವನ್ನು ಪರಿಶೀಲಿಸುವಾಗ, ಅಪರಾಧಿಯ ಹಿನ್ನಲೆಯೊಂದೇ ಮರಣ ದಂಡನೆ ವಿಧಿಸಲು ಆಧಾರವಾಗಕೂಡದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ ಎಂದು newindianexpress.com ವರದಿ ಮಾಡಿದೆ.
64 ವರ್ಷ ಪ್ರಾಯದ ಮದನ್ ಎಂಬ ಅಪರಾಧಿಯು 18 ವರ್ಷ ಹಾಗೂ ಮೂರು ತಿಂಗಳು ಸೆರೆವಾಸ ಅನುಭವಿಸಿರುವುದನ್ನು ಗಣನೆಗೆ ತೆಗೆದುಕೊಂಡ ನ್ಯಾ. ಬಿ.ಆರ್.ಗವಾಯಿ, ನ್ಯಾ. ಬಿ.ವಿ.ನಾಗರತ್ಯ ಹಾಗೂ ನ್ಯಾ. ಪಿ.ಎಸ್.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು, ಅಪರಾಧಿಯ ವೃದ್ಧಾಪ್ಯವು ಅವರ ಪರವಾಗಿ ಸಹಾನುಭೂತಿ ತೋರಿಸಬೇಕಾದ ಸನ್ನಿವೇಶವಾಗಿದೆ ಎಂದೂ ಅಭಿಪ್ರಾಯ ಪಟ್ಟಿತು.
ಹೀಗಿದ್ದೂ, ಅಪರಾಧಿಯ ಬಿಡುಗಡೆಯನ್ನು ಪರಿಗಣಿಸುವುದಕ್ಕೂ ಮುನ್ನ ಆತ ಕನಿಷ್ಠ 20 ವರ್ಷಗಳ ಸೆರೆವಾಸವನ್ನು ಅನುಭವಿಸಿರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಮದನ್ ಸುದೀರ್ಘ ಕಾಲದಿಂದ ಸೆರೆವಾಸ ಅನುಭವಿಸುತ್ತಿದ್ದರೆ, ಹತ್ಯೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ, ಯಾವುದೇ ಅಪರಾಧ ಹಿನ್ನಲೆಯಿಲ್ಲದ ಸುದೇಶ್ ಪಾಲ್ ಗೆ ಕೇವಲ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನೂ ನ್ಯಾಯಪೀಠವು ಗಮನಕ್ಕೆ ತೆಗೆದುಕೊಂಡಿತು.
ಈ ಅಂಶವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಒಂದೇ ಅಪರಾಧವನ್ನು ಎಸಗಿರುವ ಇಬ್ಬರು ವ್ಯಕ್ತಿಗಳ ಅಪರಾಧದ ಹಿನ್ನೆಲೆಯನ್ನು ಪರಿಗಣಿಸಿ, ಅವರನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಳ್ಳಬಾರದು ಎಂದು ಅಭಿಪ್ರಾಯ ಪಟ್ಟಿತು. “ಮೇಲ್ಮನವಿದಾರ ಮದನ್ ಗೆ ಸಂಬಂಧಿಸಿದಂತೆ ಆರೋಪ ಸಾಬೀತಾಗಿರುವ ಹಿನ್ನಲೆಯಿದ್ದರೂ, ರಾಜೇಂದ್ರ ಪ್ರಹ್ಲಾದ್ ರಾವ್ ವಾಸ್ನಿಕ್ ಪ್ರಕರಣದಲ್ಲಿ ಅಪರಾಧ ಹಿನ್ನಲೆ ಆತನಿಗೆ ಮರಣ ದಂಡನೆ ವಿಧಿಸಲು ಆಧಾರವಾಗುವುದಿಲ್ಲ” ಎಂಬ ತೀರ್ಪನ್ನು ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿತು.