ಸೈಬರ್ ಸೆಕ್ಯೂರಿಟಿ ಉದ್ಯೋಗಗಳಲ್ಲಿ ಶೇ. 14ರಷ್ಟು ಹೆಚ್ಚಳ ; ಅಗ್ರಸ್ಥಾನದಲ್ಲಿ ಬೆಂಗಳೂರು : ವರದಿ

Update: 2024-10-15 14:46 GMT

ಸಾಂದರ್ಭಿಕ ಚಿತ್ರ | PC : Meta AI

ಮುಂಬೈ: ಮಂಗಳವಾರ ಬಿಡುಗಡೆಯಾಗಿರುವ ವರದಿಯೊಂದರ ಪ್ರಕಾರ, ದತ್ತಾಂಶ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಗಮನದಿಂದ, ಸೈಬರ್ ಸೆಕ್ಯೂರಿಟಿ ವೃತ್ತಿಪರರ ನೇಮಕಾತಿಯಲ್ಲಿ ಕಳೆದ ವರ್ಷದಿಂದ ಶೇ. 14ರಷ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ಜಾಗತಿಕ ಉದ್ಯೋಗ ಅಂತರ್ಜಾಲ ತಾಣವಾದ ಇಂಡೀಡ್ ನ ವರದಿಯ ಪ್ರಕಾರ, ಅದರ ವೇದಿಕೆಯಲ್ಲಿ ಸೆಪ್ಟೆಂಬರ್ 2023ರಿಂದ ಸೆಪ್ಟೆಂಬರ್ 2024ರವರೆಗೆ ನಡೆದಿರುವ ಉದ್ಯೋಗ ನೇಮಕಾತಿ ಹಾಗೂ ಉದ್ಯೋಗ ಹುಡುಕಾಟವನ್ನು ಆಧರಿಸಿ ಈ ದತ್ತಾಂಶವನ್ನು ಪಡೆಯಲಾಗಿದೆ.

“ನಮ್ಮ ಜೀವನ ಆನ್ ಲೈನ್ ನತ್ತ ಹೋಗುತ್ತಿರುವುದರಿಂದ, ಕಂಪೆನಿಗಳು ತಮ್ಮ ದತ್ತಾಂಶ ಸುರಕ್ಷತೆಯತ್ತ ಗಮನ ಹರಿಸಿದ್ದು, ಇದರಿಂದಾಗಿ ಸೈಬರ್ ಸೆಕ್ಯೂರಿಟಿ ತಜ್ಞರಿಗೆ ಬೇಡಿಕೆ ಸೃಷ್ಟಿಯಾಗಿದೆ. ಇದು ಬಹಳಷ್ಟು ಅವಕಾಶಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ವಲಯವಾಗಿದೆ” ಎಂದು ವರದಿಯನ್ನು ಉಲ್ಲೇಖಿಸಿ ಇಂಡೀಡ್ ಇಂಡಿಯಾದ ಮಾರಾಟ ಮುಖ್ಯಸ್ಥ ಸತೀಶ್ ಕುಮಾರ್ ಹೇಳಿದ್ದಾರೆ.

ಈ ನಡುವೆ, ದೇಶಾದ್ಯಂತ ಪಟ್ಟಿಯಾಗುತ್ತಿರುವ ಸೈಬರ್ ಸೆಕ್ಯೂರಿಟಿ ಉದ್ಯೋಗಗಳ ಪೈಕಿ ಶೇ. 10ರಷ್ಟು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಬೆಂಗಳೂರು ಅಗ್ರಸ್ಥಾನದಲ್ಲಿದೆ ಎಂಬ ಮಾಹಿತಿ ಈ ವರದಿಯಿಂದ ಬಯಲಾಗಿದೆ. ನಂತರದ ಸ್ಥಾನಗಳಲ್ಲಿ ದಿಲ್ಲಿ - ಎನ್ಸಿಆರ್ (ಶೇ. 4), ಹೈದರಾಬಾದ್ (ಶೇ. 2) ಹಾಗೂ ಮುಂಬೈ (ಶೇ. 2) ಇವೆ.

ಸೈಬರ್ ಸೆಕ್ಯೂರಿಟಿ ತಜ್ಞರ ಉದ್ಯೋಗಗಳಲ್ಲಿ ಬೆಂಗಳೂರು ಪ್ರಾಬಲ್ಯ ಸಾಧಿಸಲು ಬೆಂಗಳೂರು ಭಾರತದ ಪ್ರಮುಖ ಐಟಿ ತಾಣವಾಗಿರುವುದು, ಪ್ರಮುಖ ಐಟಿ ಕಂಪನಿಗಳು ಹಾಗೂ ನವೋದ್ಯಮಗಳಿಗೆ ತವರಾಗಿರುವುದು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಡಿಜಿಟಲ್ ಕಾರ್ಯಾಚರಣೆಗಳು ವಿಸ್ತರಿಸುತ್ತಿರುವುದರಿಂದ, ನಗರದಲ್ಲಿನ ವ್ಯಾಪಾರ-ವಹಿವಾಟುಗಳು ಸೈಬರ್ ಸೆಕ್ಯೂರಿಟಿ ಕಡೆ ಗಮನ ಹರಿಸುವುದು ಕ್ಷಿಪ್ರವಾಗುತ್ತಿದ್ದು, ಸೈಬರ್ ಸೆಕ್ಯೂರಿಟಿ ತಜ್ಞರಿಗಾಗಿನ ಬೇಡಿಕೆ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಎರಡನೆ ಸ್ಥಾನದಲ್ಲಿರುವ ದಿಲ್ಲಿ-ಎನ್ಸಿಆರ್, ಶೇ. 4ರಷ್ಟು ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶಗಳನ್ನು ಒದಗಿಸಿದ್ದು, ಕಾರ್ಪೊರೇಟ್ ತಾಣವಾಗಿರುವುದು, ಅಸಂಖ್ಯಾತ ಬಹುರಾಷ್ಟ್ರೀಯ ಕಂಪನಿಗಳ ತವರಾಗಿರುವುದು, ಸರಕಾರಿ ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳಿರುವುದು ಅದಕ್ಕೆ ಪ್ರಮುಖ ಕಾರಣ ಎಂದು ವರದಿಯು ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News