ಉಗ್ರ ಲಾರೆನ್ಸ್ ಬಿಷ್ಣೋಯ್ ಗುಜರಾತ್ ಜೈಲಿನಲ್ಲೇ ಯಾಕಿರಬೇಕು?

Update: 2024-10-15 15:56 GMT

ಲಾರೆನ್ಸ್ ಬಿಷ್ಣೋಯ್ | PC : X 

ಬಾಬಾ ಸಿದ್ದಿಕ್ ಕೊಲೆ ಪ್ರಕರಣದಲ್ಲಿ ಲಾರನ್ಸ್ ಬಿಶ್ನೋಯಿ ಗ್ಯಾಂಗ್ ಹೊಣೆ ಹೊತ್ತುಕೊಂಡಿದೆ. ಕಳೆದ ವಾರ ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿರುವ ಉಗ್ರವಾದಿ ಲಾರೆನ್ಸ್ ಬಿಷ್ಣೋಯಿ ಗುಜರಾತ್ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮತ್ತು ಎನ್‌ಐಎ ತನಿಖೆ ನಡೆಸುತ್ತಿರುವ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಗುಜರಾತಿನ ಅಹ್ಮದಾಬಾದ್ ನಲ್ಲಿರುವ ಸಾಬರಮತಿ ಸೆಂಟ್ರಲ್ ಜೈಲಿನಲ್ಲಿ ಆತನನ್ನು ಇಡಲಾಗಿದೆ.

ಏಪ್ರಿಲ್‌ನಲ್ಲಿ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತಿಕೊಂಡಿದ್ದರೂ, ಪ್ರಸ್ತುತ ಗುಜರಾತ್‌ನ ಸಾಬರಮತಿ ಜೈಲಿನಲ್ಲಿರುವ ಕುಖ್ಯಾತ ಭಯೋತ್ಪಾದಕನ ಕಸ್ಟಡಿ ಪಡೆಯಲು ಮುಂಬೈ ಪೊಲೀಸರಿಗೆ ಇನ್ನು ಸಾಧ್ಯವಾಗಿಲ್ಲ.

ಇದರ ಹಿಂದಿನ ಕಾರಣವೇನು ಗೊತ್ತೇ?

ಎನ್‌ಡಿಟಿವಿ ವರದಿ ಮಾಡಿದಂತೆ, ಮುಂಬೈ ಪೊಲೀಸರು ಸಾಬರಮತಿ ಜೈಲಿನಿಂದ ಬಿಷ್ಣೋಯಿ ಅವರ ಕಸ್ಟಡಿಗೆ ಹಲವು ಮನವಿಗಳನ್ನು ಸಲ್ಲಿಸಿದ್ದರು. ಆದರೆ ಬಿಶ್ನೋಯಿಯ ವರ್ಗಾವಣೆಯನ್ನು ತಡೆಯುವ ಮೋದಿ ಸರಕಾರದ ಗೃಹ ಸಚಿವಾಲಯದ ಆದೇಶದಿಂದಾಗಿ ಈ ವಿನಂತಿಗಳನ್ನು ತಿರಸ್ಕರಿಸಲಾಗಿದೆ.

ಏನಿದು ಕೇಂದ್ರ ಗೃಹ ಸಚಿವಾಲಯದ ಆದೇಶ ? ಇದು ಏನು ಹೇಳುತ್ತೆ?

ಪ್ರಕರಣ ದೇಶದ ಯಾವುದೇ ಭಾಗದ್ದಾಗಿದ್ದರೂ ಗುಜರಾತಿನ ಸಾಬರಮತಿ ಜೈಲಿನಲ್ಲಿ ಮಾತ್ರ ಲಾರೆನ್ಸ್ ಬಿಷ್ಣೋಯಿ ವಿಚಾರಣೆ ಯಾಕೆ ಸಾಧ್ಯ?

ಅಹ್ಮದಾಬಾದ್‌ನ ಸಾಬರಮತಿ ಜೈಲಿನಲ್ಲಿರುವ ಭಯೋತ್ಪಾದಕ ಲಾರೆನ್ಸ್ ಬಿಷ್ಣೋಯಿಯ ಚಲನವಲನಗಳ ಮೇಲೆ ಸಿಆರ್‌ಪಿಸಿಯ ಕಲಂ 268ರಡಿ ನಿರ್ಬಂಧ ವಿಧಿಸಲಾಗಿದೆ. ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಜೈಲಿನಿಂದ ಹೊರಕಳಿಸದಂತೆ ನಿರ್ದೇಶಿಸಲು ಈ ಸೆಕ್ಷನ್ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಅಪರಾಧದ ಸ್ವರೂಪ, ವ್ಯಕ್ತಿಯನ್ನು ಹೊರತೆಗೆಯಲು ಅನುಮತಿಸಿದರೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಮತ್ತು ಸಾರ್ವಜನಿಕ ಹಿತಾಸಕ್ತಿಗಳನ್ನು ಈ ರೀತಿ ಆದೇಶ ನೀಡುವ ಮುನ್ನ ಪರಿಗಣಿಸಲಾಗುತ್ತದೆ.

ಖಾಲಿಸ್ತಾನ್ ಬೆಂಬಲಿಗರಿಗೆ ಭಯೋತ್ಪಾದನೆಗೆ ನಿಧಿ ನೀಡಿದ್ದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎನ್‌ಐಎ ಬಿಷ್ಣೋಯ್ ಯನ್ನು ಬಂಧಿಸಿತ್ತು. ಕ್ರಿಮಿನಲ್ ಪ್ರೊಸೀಜರಲ್ ಕೋಡ್ (CrPC) ನ ಸೆಕ್ಷನ್ 268 ರ ಅಡಿಯಲ್ಲಿ ಆರಂಭದಲ್ಲಿ ವಿಧಿಸಲಾದ ನಿರ್ಬಂಧ ಆದೇಶವು ಈ ವರ್ಷದ ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದರೆ ಈ ಅವಧಿಯನ್ನು ಕೇಂದ್ರ ಗೃಹ ಸಚಿವಾಲಯವು ಈ ವರ್ಷ ಆಗಸ್ಟ್‌ ನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್)ದ ಕಲಂ 303ರಡಿ ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಿತ್ತು. ಇದರಿಂದಾಗಿ ಬಿಷ್ಣೋಯಿಯ ವಿಚಾರಣೆ ನಡೆಸಬೇಕಿದ್ದರೆ ಅದು ಸಾಬರಮತಿ ಜೈಲು ಆವರಣದೊಳಗೆ ಮಾತ್ರ ಸಾಧ್ಯ.

ಮೋದಿ ಸರಕಾರದ ಗೃಹ ಸಚಿವಾಲಯದ ಹೊಸ ಆದೇಶದ ಪ್ರಕಾರ ಬಿಷ್ಣೋಯಿಯ ಚಲನವಲನಗಳ ಮೇಲೆ ಹೇರಲಾಗಿರುವ ನಿರ್ಬಂಧವು ಆಗಸ್ಟ್ 2025ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಾಬರಮತಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಶ್ವೇತಾ ಶ್ರೀಮಾಲಿ ಅವರು ದೃಢಪಡಿಸಿದ್ದಾರೆ.

‘ಪೋಲಿಸರು ಅಥವಾ ಯಾವುದೇ ತನಿಖಾ ಸಂಸ್ಥೆಯು ಬಿಷ್ಣೋಯಿಯನ್ನು ವಿಚಾರಣೆಗೊಳಪಡಿಸಲು ಬಯಸಿದರೆ ಅವರು ನ್ಯಾಯಾಂಗ ಆದೇಶವನ್ನು ಅಗತ್ಯವಾಗಿ ಒದಗಿಸಬೇಕು ಮತ್ತು ಆತನ ತನಿಖೆಯನ್ನು ಜೈಲು ಆವರಣದಲ್ಲಿಯೇ ನಡೆಸಬೇಕು. ನಾವು ಇತ್ತೀಚಿಗೆ ಇಂತಹ ಯಾವುದೇ ಕೋರಿಕೆಗಳನ್ನು ಸ್ವೀಕರಿಸಿಲ್ಲ’ ಎಂದು ಶ್ರೀಮಾಲಿ ವಿವರಿಸಿದ್ದಾರೆ.

ಗಮನಾರ್ಹವೆಂದರೆ ಗುಜರಾತಿನ ಹಿರಿಯ ಪೋಲಿಸ್ ಅಧಿಕಾರಿಗಳು ಬಿಷ್ಣೋಯಿಯನ್ನು ಜೈಲಿನಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆಯೇ ಎನ್ನುವುದನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ. ಈ ವಿಷಯವನ್ನು ಬಹಿರಂಗಗೊಳಿಸುವುದು ರಾಷ್ಟ್ರೀಯ ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ಜೈಲಿನಲ್ಲಿ ಬಿಷ್ಣೋಯಿ ಇತರ ಯಾವುದೇ ವಿಚಾರಣಾಧೀನ ಕೈದಿಯಂತೆ ಹಕ್ಕುಗಳನ್ನು ಹೊಂದಿದ್ದಾನೆ ಎಂದು ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ.

‘ಬಾಬಾ ಸಿದ್ದೀಕಿ ಹತ್ಯೆಗೆ ಬಿಷ್ಣೋಯಿ ಹೊಣೆಯಾಗಿದ್ದಾನೆ ’ ಎಂದು ತನ್ನ ‘ಶುಬ್ಬು ಲೋಣಕರ್ ’ ಖಾತೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಅಕೋಲಾ ನಿವಾಸಿ ಶುಭಂ ಲೋಣಕರ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ. ಆತನ ಸೋದರ ಪ್ರವೀಣನನ್ನು ಪೋಲಿಸರು ಪುಣೆಯಲ್ಲಿ ಬಂಧಿಸಿದ್ದಾರೆ. ಈತನೂ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಬಿಷ್ಣೋಯಿ ಸ್ವತಃ ಅಥವಾ ಜೈಲಿನ ಹೊರಗಿನ ಯಾವುದೋ ವ್ಯಕ್ತಿಯ ಜೊತೆ ಸಮಾಲೋಚನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟ್ ಹಾಕಿರುವ ಸಾಧ್ಯತೆಯ ಕುರಿತ ಪ್ರಶ್ನೆಗೆ ಶ್ರೀಮಾಲಿ, ಅದು ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News