ಕೆನಡಾದಲ್ಲಿ ನಿಜ್ಜರ್ ಹತ್ಯೆಗೆ ಅಮಿತ್ ಶಾ ಅನುಮತಿ: ಕೆನಡಾ ಆರೋಪ ಉಲ್ಲೇಖಿಸಿ 'ವಾಷಿಂಗ್ಟನ್ ಪೋಸ್ಟ್ʼ ವರದಿ

Update: 2024-10-16 07:12 GMT

ಕೇಂದ್ರ ಗೃಹ ಸಚಿವ ಅಮಿತ್ ಶಾ (Photo: PTI)

ಹೊಸದಿಲ್ಲಿ: ಕೆನಡಾದಲ್ಲಿ ನಡೆದಿದ್ದ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ನಿಗೂಢ ಹತ್ಯೆ ಪ್ರಕರಣದಲ್ಲಿ ಈಗ ಅನುಮಾನದ ಕಣ್ಣು ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಡೆ ತಿರುಗಿದೆ. ಕೆನಡಾ ಅಧಿಕಾರಿಗಳ ಆರೋಪಗಳನ್ನು ಉಲ್ಲೇಖಿಸಿ ಮಾಡಿರುವ ವಿಶೇಷ ವರದಿಯಲ್ಲಿ ʼವಾಷಿಂಗ್ಟನ್ ಪೋಸ್ಟ್ʼ ಈ ಪ್ರಕರಣದಲ್ಲಿ ಅಮಿತ್ ಶಾ ಕೈವಾಡ ಇದೆ ಎಂದು ಹೇಳಿದೆ.

ಅಮಿತ್ ಶಾ ಮತ್ತು ಭಾರತದ ವಿದೇಶಿ ಗುಪ್ತಚರ ಸಂಸ್ಥೆ RAW ದ ಹಿರಿಯ ಅಧಿಕಾರಿಗಳು ನಿಜ್ಜರ್ ಹತ್ಯೆಗೆ ಅನುಮತಿ ನೀಡಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಕೆನಡಾದ ಉನ್ನತ ಭದ್ರತಾ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆ ಅಕ್ಟೋಬರ್ 12 ರಂದು ಸಿಂಗಾಪುರದಲ್ಲಿ ನಡೆದ ರಹಸ್ಯ ಸಭೆಯ ವೇಳೆ ಈ ಮಾಹಿತಿಯನ್ನು ಹಂಚಿಕೊಂಡಿರುವುದಾಗಿ ವರದಿಯಾಗಿದೆ.

ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಕೆನಡಾ ಅಧಿಕಾರಿಗಳು ಹಸ್ತಾಂತರ ಮಾಡಿರುವ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ʼವಾಷಿಂಗ್ಟನ್ ಪೋಸ್ಟ್ʼ, ಭಾರತ ಬಿಷ್ಣೋಯ್ ಗ್ಯಾಂಗ್ ಅನ್ನು ಬಳಸಿ ಕಾರ್ಯಾಚರಣೆ ನಡೆಸಿದ ಕುರಿತ ಮಾಹಿತಿ ಇದೆ ಎಂದು ವರದಿಯಲ್ಲಿ ಹೇಳಿದೆ.

ಈ ಬಗ್ಗೆ ತನಗೆ ಸಿಕ್ಕಿರುವ ಮಾಹಿತಿಯ ಬಗ್ಗೆ ವಿವರವಾಗಿ ತನಿಖೆ ಮಾಡಲು ಭಾರತೀಯ ರಾಜತಾಂತ್ರಿಕರನ್ನು ವಿಚಾರಣೆಗೆ ಒಳಪಡಿಸಲು ಕೆನಡಾ ಬಯಸಿರಬಹುದು. ಆದರೆ ಆ ರಾಜತಾಂತ್ರಿಕರಿಗಿದ್ದ ವಿನಾಯಿತಿಯನ್ನು ರದ್ದು ಪಡಿಸಲು ಭಾರತ ಸರಕಾರ ಒಪ್ಪದೇ ಇದ್ದಿದ್ದಕ್ಕೆ ಭಾರತೀಯ ಹೈಕಮಿಷನರ್ ಸಹಿತ ಆರು ಮಂದಿ ರಾಜತಾಂತ್ರಿಕರನ್ನು ಕೆನಡಾ ದೇಶ ಬಿಡುವಂತೆ ಹೇಳಿದೆ ಎಂದು ವರದಿಯಾಗಿದೆ.

ʼವಾಷಿಂಗ್ಟನ್ ಪೋಸ್ಟ್ʼ ವರದಿ ಮತ್ತು ಅಮಿತ್ ಶಾ ಭಾಗಿಯಾಗಿರುವುದರ ಕುರಿತ ಕೆನಡಾ ಅಧಿಕಾರಿಗಳ ಆರೋಪಕ್ಕೆ ವಿದೇಶಾಂಗ ವ್ಯವಹಾರ ಅಥವಾ ಗೃಹ ವ್ಯವಹಾರಗಳ ಸಚಿವಾಲಯಗಳು ಪ್ರತಿಕ್ರಿಯಿಸಿಲ್ಲ ಎಂದು ʼThe Wireʼ ಹೇಳಿದೆ.

ಆದರೆ, ನಿವೃತ್ತ ಭಾರತೀಯ ರಾಜತಾಂತ್ರಿಕರನ್ನು ಮಾತನಾಡಿಸಿರುವುದಾಗಿ ಹೇಳಿರುವ The Wire ಸುದ್ದಿತಾಣ , ಕ್ಯಾಬಿನೆಟ್ ಮಂತ್ರಿಯೊಬ್ಬರು ಇಂಥ ಕಾರ್ಯಾಚರಣೆಯಲ್ಲಿ ಅದೂ ಸಾಗರದಾಚೆಗಿನ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಆ ನಿವೃತ್ತ ಅಧಿಕಾರಿ ಅಚ್ಚರಿ ವ್ಯಕ್ತಪಡಿಸಿರುವುದಾಗಿ ಹೇಳಿದೆ.

ಕೆನಡಾದ ಅಧಿಕಾರಿಗಳು ಅರೋಪಿಸಿರುವಂಥ ಯಾವುದೇ ರೀತಿಯಲ್ಲಿ ಶಾ ತೊಡಗಿಸಿಕೊಂಡಿಲ್ಲ ಎಂದು ಗುಪ್ತಚರ ಸಂಸ್ಥೆಯ ಮಾಜಿ ಮುಖ್ಯಸ್ಥ ತಿಳಿಸಿರುವುದಾಗಿಯೂ The Wire ಹೇಳಿದೆ.

ವಾಷಿಂಗ್ಟನ್ ಪೋಸ್ಟ್ ನ ಈ ಹಿಂದಿನ ವರದಿಯಲ್ಲಿ ಅಮಿತ್ ಶಾ ಹೆಸರು ಇರಲಿಲ್ಲ. ಭಾರತದ ಹಿರಿಯ ಸಚಿವರು ಮತ್ತು RAW ದ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಮಾತ್ರ ಹೇಳಲಾಗಿತ್ತು. ಆದರೆ ನಂತರ ಪರಿಷ್ಕರಿಸಿದ ವರದಿಯಲ್ಲಿ ಪತ್ರಿಕೆ ತನ್ನ ಮೂಲಗಳಿಂದ ಲಭ್ಯವಾದ ಹೆಚ್ಚು ವಿವರವಾದ ಇನ್ಪುಟ್ ಆಧಾರದ ಮೇಲೆ ಅಮಿತ್ ಶಾ ಹೆಸರನ್ನು ನೇರವಾಗಿ ಉಲ್ಲೇಖಿಸಿದೆ.

ಶಾ ವಿರುದ್ಧ ಇಂಥ ಕೃತ್ಯದ ಆರೋಪ ಬರುತ್ತಿರುವುದು ಇದೇ ಮೊದಲೇನೂ ಆಲ್ಲ. ದಶಕದ ಹಿಂದೆ ಗುಜರಾತ್ ನ ಗೃಹ ಸಚಿವರಾಗಿದ್ದಾಗ ಸೊಹ್ರಾಬುದ್ದೀನ್, ಅವರ ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿಯನ್ನು ನಕಲಿ ಪೊಲೀಸ್ ಎನ್‌ಕೌಂಟರ್‌ಗಳ ಮೂಲಕ ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿದ್ದಾಗಿ ಸಿಬಿಐ ಆರೋಪಿಸಿತ್ತು. ಆದರೆ ಮೋದಿ ಪ್ರಧಾನಿಯಾದ ಕೂಡಲೇ ಶಾ ಅವರನ್ನು ವಿಚಾರಣಾ ನ್ಯಾಯಾಲಯ ಪ್ರಕರಣದಿಂದ ಬಿಡುಗಡೆ ಮಾಡಲಾಯಿತು ಮತ್ತು ಸಿಬಿಐ ಮೇಲ್ಮನವಿ ಸಲ್ಲಿಸಲು ಮುಂದಾಗಿರಲಿಲ್ಲ.

ಈಗ ನಿಜ್ಜರ್ ಹತ್ಯೆ ವಿಚಾರದಲ್ಲಿ ತನ್ನ ಆರೋಪ ಕುರಿತು ಕೆನಡಾ ಹಿಂದೆಂದಿಗಿಂತಲೂ ಹೆಚ್ಚು ಖಚಿತವಾಗಿರುವಂತೆ ಕಾಣುತ್ತಿದೆ. ಪೋಲೀಸರ ಬಳಿಯಿರುವ ಸ್ಪಷ್ಟ ಮತ್ತು ಬಲವಾದ ಪುರಾವೆಗಳನ್ನು ಉಲ್ಲೇಖಸಿ ಕೆನಡಾ ಪಧಾನಿ ಜಸ್ಟಿನ್ ಟ್ರುಡೊ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್ ಗಳ ಪಾತ್ರವಿದೆ ಎಂದು ಆರೋಪಿಸಿದ್ದಾರೆ.

2023ರ ಸೆಪ್ಟೆಂಬರ್ ನಲ್ಲಿ ಖಾಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಭಾಗಿಯಾಗಿರುವ ಆರೋಪವನ್ನು ಮೊದಲ ಸಲ ಮಾಡಿದ್ದಾಗ ಟ್ರೂಡೊ ಮೊದಲು ಗುಪ್ತಚರ ಮಾಹಿತಿಯನ್ನಷ್ಟೆ ಉಲ್ಲೇಖಿಸಿದ್ದರು. ಅದಾದ ಬಳಿಕ ಕೆನಡಾ ಪೊಲೀಸರು ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ನ್ಯೂಯಾರ್ಕ್ ಮೂಲದ ಖಾಲಿಸ್ತಾನಿ ವಕೀಲರನ್ನು ಗುರಿಯಾಗಿಸಿಕೊಂಡು ಭಾರತದ ಏಜಂಟರು ನಡೆಸಿದ ಹತ್ಯೆ ಸಂಚನ್ನು ಬಹಿರಂಗಪಡಿಸಿರುವುದಾಗಿ ಹೇಳಿದ್ದ ಅಮೆರಿಕ ಕೂಡ ಸಾಕ್ಷ್ಯ ಸಂಗ್ರಹದಲ್ಲಿ ಕೆನಡಾಕ್ಕೆ ಸಹಕರಿಸಿರುವ ಸಾಧ್ಯತೆಯಿದೆ.

ಅಮೆರಿಕಾದಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಯತ್ನ ಪ್ರಕರಣದಲ್ಲಿ ಬಂಧಿತ ಭಾರತೀಯ ನಿಖಿಲ್ ಗುಪ್ತಾ ವಿಚಾರಣೆಯಲ್ಲಿ ಭಾರತದ ಹಿರಿಯ ಅಧಿಕಾರಿ ವಿಕ್ರಂ ಯಾದವ್ ಎಂಬವರ ಹೆಸರು ಬಂದಿದ್ದನ್ನು ʼವಾಷಿಂಗ್ಟನ್ ಪೋಸ್ಟ್ʼ ವರದಿ ಮಾಡಿತ್ತು. ಆದರೆ ವಿಕ್ರಂ ಯಾದವ್ ರನ್ನು ಸೇವೆಯಿಂದ ವಜಾ ಮಾಡಿ ಬಂಧಿಸಲಾಗಿದೆ ಎಂದು ಭಾರತ ಸರಕಾರ ಅಮೆರಿಕಕ್ಕೆ ಹೇಳಿತ್ತು. ಯಾದವ್ ಮೊದಲು ಸಿ ಆರ್ ಪಿ ಎಫ್ ನಲ್ಲಿದ್ದರು ಆಮೇಲೆ ರಾ ಗೆ ನಿಯೋಜಿತರಾದರು. ಆದರೆ ಯಾದವ್ ರನ್ನು ಯಾವ ಆರೋಪದ ಮೇಲೆ ಯಾವಾಗ ಬಂಧಿಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ವಿಕ್ರಂ ಯಾದವ್ ಅವರಷ್ಟಕ್ಕೇ ಇಂತಹ ದೊಡ್ಡ ಕೃತ್ಯಕ್ಕೆ ಕೈಹಾಕುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಭಾರತೀಯ ಬೇಹು ಇಲಾಖೆಯ ನಿವೃತ್ತ ಅಧಿಕಾರಿಗಳು ಹೇಳಿದ್ದಾರೆ.

ಭಾರತದ ಏಜಂಟರು ಕೆನಡಾದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಹಾಗು ಸಿಖ್ಖರನ್ನು ಕೊಲ್ಲಲು ಲಾರೆನ್ಸ್ ಬಿಶ್ನೋಯಿ ಗ್ಯಾಂಗ್ ಅನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಅಕ್ಟೋಬರ್ 14ರಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಟ್ರುಡೊ, ಭಾರತದ ವಿರುದ್ದ ಸರಣಿ ಆರೋಪಗಳನ್ನು ಮಾಡಿದ್ದರು.

ಭಾರತ ತನ್ನ ರಾಜತಾಂತ್ರಿಕರನ್ನು ಬಳಸಿಕೊಂಡು ಸಂಘಟಿತ ಅಪರಾಧಗಳ ಮೂಲಕ ಕೆನಡಾ ಪ್ರಜೆಗಳ ಮೇಲೆ ದಾಳಿ ಮಾಡುತ್ತಿದೆ. ಹಿಂಸಾಚಾರ ಮತ್ತು ಹತ್ಯೆಗಳ ಮೂಲಕ ಇಲ್ಲಿನ ಜನರಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿದೆ ಎಂದಿದ್ದರು. ಇಂಥ ಕೃತ್ಯಗಳ ಮೂಲಕ ಭಾರತ ಬಹು ದೊಡ್ಡ ತಪ್ಪು ಮಾಡಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ರುಡೊ ಹೇಳಿದ್ದರು.

ಲಾರೆನ್ಸ್ ಬಿಶ್ನೋಯಿ ಹತ್ತಾರು ಕೊಲೆ, ಲೂಟಿ, ಡ್ರಗ್ಸ್ ದಂಧೆ ಇತ್ಯಾದಿ ಆರೋಪಗಳನ್ನು ಎದುರಿಸುತ್ತಿರುವ ಉಗ್ರಗಾಮಿಯಾಗಿದ್ದು ಆತನನ್ನು ಗುಜರಾತ್ ನ ಸಾಬರಮತಿ ಜೈಲಿನಲ್ಲಿಡಲಾಗಿದೆ. ಆದರೆ ಆತ ಅಲ್ಲಿಂದಲೇ ತನ್ನ ಎಲ್ಲ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂಬ ಆರೋಪವಿದೆ. ಜೈಲಲ್ಲಿದ್ದೇ ಆತ ಟಿವಿ ಸಂದರ್ಶನವನ್ನೂ ನೀಡಿದ್ದ. ಸಾಲದ್ದಕ್ಕೆ ಆತನನ್ನು ಬೇರೆಲ್ಲಿಗೂ ವಿಚಾರಣೆಗೆ ವರ್ಗಾವಣೆ ಮಾಡದ ಹಾಗೆ ಮೋದಿ ಸರಕಾರದ ಗೃಹ ಸಚಿವಾಲಯ ನಿರ್ಬಂಧ ವಿಧಿಸಿದೆ. ಹಾಗಾಗಿ ಪಂಜಾಬ್, ಮಹಾರಾಷ್ಟ್ರಗಳಲ್ಲಿ ಆತನ ವಿರುದ್ಧ ಪ್ರಕರಣಗಳಿದ್ದರೂ ಆತನನ್ನು ಅಲ್ಲಿಗೆ ಕರೆದುಕೊಂಡು ಹೋಗುವುದು ಸಾಧ್ಯವಾಗುತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News