ರಾಜಸ್ಥಾನ | ಶಾಲೆಯಲ್ಲಿ ನೀರಿನ ಬಕೆಟ್ ಮುಟ್ಟಿದ್ದಕ್ಕೆ ದಲಿತ ವಿದ್ಯಾರ್ಥಿಗೆ ಥಳಿತ
ಅಲ್ವಾರ್ : ಮೇಲ್ಜಾತಿಯವರಿಗೆ ಸೇರಿದ ಶಾಲೆಯಲ್ಲಿ ನೀರನ್ನು ಕುಡಿಯಲು ಯತ್ನಿಸುವಾಗ ಕೈಪಂಪಿನ ಬಳಿಯಿದ್ದ ಕುಡಿಯುವ ನೀರಿನ ಬಕೆಟ್ ಮುಟ್ಟಿದ ಎಂಬ ಕಾರಣಕ್ಕೆ ಎಂಟು ವರ್ಷದ ದಲಿತ ವಿದ್ಯಾರ್ಥಿಯನ್ನು ಥಳಿಸಿರುವ ಘಟನೆ ಶನಿವಾರ ರಾಜಸ್ಥಾನದ ಅಲ್ವಾರ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಸಂತ್ರಸ್ತ ಬಾಲಕನ ಕುಟುಂಬದ ಸದಸ್ಯರು ದೂರು ನೀಡಿದ ನಂತರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ನಾಲ್ಕನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚಿರಾಗ್ ಎಂಬ ಬಾಲಕ ಬಾಯಾರಿಕೆಯಿಂದ ಶಾಲಾ ಆವರಣದಲ್ಲಿದ್ದ ಕೈಪಂಪಿನ ಬಳಿ ಹೋಗಿದ್ದಾನೆ. ಅಲ್ಲಿ ಆರೋಪಿ ರತಿರಾಮ್ ಠಾಕೂರ್ ಎಂಬಾತ ತನ್ನ ಬಕೆಟ್ ನಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ನೀರು ಕುಡಿಯಲು ಕೈಪಂಪಿನ ಬಳಿ ಇದ್ದ ಬಕೆಟ್ ಅನ್ನು ಚಿರಾಗ್ ತೆಗೆದಿದ್ದರಿಂದ ಕುಪಿತಗೊಂಡ ಠಾಕೂರ್, ಬಾಲಕನನ್ನು ಥಳಿಸಲು ಪ್ರಾರಂಭಿಸಿದ ಎಂದು ಚಿರಾಗ್ ತಂದೆ ಪನ್ನಾಲಾಲ್ ದೂರಿದ್ದಾರೆ.
ಶಾಲೆಯಿಂದ ಅಳುತ್ತಾ ಮನೆಗೆ ಬಂದಿರುವ ಚಿರಾಗ್, ಘಟನೆಯ ಕುರಿತು ಕುಟುಂಬದ ಸದಸ್ಯರಿಗೆ ವಿವರಿಸಿದ್ದಾನೆ. ಈ ಕುರಿತು ಚಿರಾಗ್ ಕುಟುಂಬದ ಸದಸ್ಯರು ಠಾಕೂರ್ ನೊಂದಿಗೆ ವಾಗ್ವಾದಕ್ಕಿಳಿದಾಗ, ಆತ ಅವರನ್ನು ಹತ್ಯೆಗೈಯ್ಯುವ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಶಾಲೆಯ ಪ್ರಾಂಶುಪಾಲರು ನಮ್ಮ ದೂರಿಗೆ ಯಾವುದೇ ಕ್ರಮ ಕೈಗೊಳ್ಳದೆ, ನಮ್ಮನ್ನು ಪೊಲೀಸ್ ಠಾಣೆಗೆ ತೆರಳುವಂತೆ ಸೂಚಿಸಿದರು ಎಂದೂ ಪನ್ನಾಪಾಲ್ ಆರೋಪಿಸಿದ್ದಾರೆ.