ರ‍್ಯಾಗಿಂಗ್ ನ ಕರಾಳ ಮುಖ: ಕಿರಿಯ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ಪುಸ್ತಕ ಓದಲು ಬಲವಂತ
ಹೊಸದಿಲ್ಲಿ: ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರ ಸುರಕ್ಷತೆಗೆ ಆಗ್ರಹಿಸಿ ದೇಶಾದ್ಯಂತ ದೊಡ್ಡ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ವೈದ್ಯಕೀಯ ಕಾಲೇಜುಗಳಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಕಿರಿಯ ವಿದ್ಯಾರ್ಥಿನಿಯರನ್ನು ರ‍್ಯಾಗಿಂಗ್ ಮಾಡುತ್ತಿರುವ ಅಮಾನವೀಯ ಮುಖ ಬೆಳಕಿಗೆ ಬಂದಿದೆ.
ಹಿರಿಯ ವಿದ್ಯಾರ್ಥಿನಿಯರು ತಮ್ಮ ಕಿರಿಯರಿಗೆ ಕಿರುಕುಳ ನೀಡಿ ಅಶ್ಲೀಲ ಪುಸ್ತಕಗಳನ್ನು ಗಟ್ಟಿಯಾಗಿ ಓದುವಂತೆ ಬಲವಂತಪಡಿಸುವುದು ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಕಂಡುಬರುತ್ತಿದೆ. ಇದು ಮಹಿಳೆಯರ ಅದರಲ್ಲೂ ಮುಖ್ಯವಾಗಿ ನರ್ಸ್ ಗಳ ವಿರುದ್ದದ ಲೈಂಗಿಕ ಕಿರುಕುಳಕ್ಕೆ ನಿದರ್ಶನವಾಗಿದೆ. ಇದನ್ನು ಬೆಳೆಯುತ್ತಿರುವ ಅತ್ಯಾಚಾರ ಸಂಸ್ಕೃತಿ ಎಂದು ಲೈಂಗಿಕ ದೌರ್ಜನ್ಯ ಬಗೆಗಿನ ತಜ್ಞರು ವಿಶ್ಲೇಷಿಸುತ್ತಾರೆ.
ವೈದ್ಯಕೀಯ ಸಾಹಿತ್ಯ ಅಥವಾ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮ ಎಂಬ ಶೀರ್ಷಿಕೆಯ ಕಿರು ಪುಸ್ತಕಗಳನ್ನು ಮನನ ಮಾಡಿಕೊಳ್ಳುವಂತೆ ಹೊಸ ವಿದ್ಯಾರ್ಥಿಗಳಿಗೆ ಬಲವಂತಪಡಿಸಲಾಗುತ್ತದೆ ಹಾಗೂ ಪುಸ್ತಕದ ಪ್ರತಿಗಳನ್ನು ಸದಾ ಇಟ್ಟುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಇದರಿಂದ ಹೊಸಬರು ಯಾವುದೇ ವಯಸ್ಸಿನ ಮಹಿಳೆಯರನ್ನು ಭೋಗದ ವಸ್ತುವಾಗಿ ನೋಡುವ ಪ್ರವೃತ್ತಿ ಬೆಳೆಯುತ್ತಿದೆ.
ಹೊಸ ವಿದ್ಯಾರ್ಥಿಗಳು ಹೇಳುವಂತೆ ಇಂಥ ಪುಸ್ತಕದ ಅಶ್ಲೀಲ ಅಂಶಗಳನ್ನು ಗಟ್ಟಿಯಾಗಿ ಓದಲು ಬಲವಂತಪಡಿಸಲಾಗುತ್ತಿದೆ. ತಡವರಿಸಿದರೆ ಅಥವಾ ನಕ್ಕರೆ ಮತ್ತೆ ಮೊದಲಿನಿಂದ ಓದಬೇಕಾಗುತ್ತದೆ. ಇದರಲ್ಲಿ 0-15 ವರ್ಷದವರೆಗೆ ಸ್ತನ ಬೆಳವಣಿಗೆಯ ಹಂತಗಳ ವಿವರಣೆ ಇದ್ದು, ಅವುಗಳನ್ನು ಹಣ್ಣು ಅಥವಾ ತರಕಾರಿಗಳಿಗೆ ಹೋಲಿಸಲಾಗುತ್ತದೆ.
ಸಹಪಾಠಿಗಳು ಸೇರಿದಂತೆ ಪ್ರತಿ ಮಹಿಳೆಯರ ಬಗೆಗಿನ ವಿವರಣೆಗಳೂ ದೌರ್ಜನ್ಯಕ್ಕೆ ಪ್ರಚೋದನೆ ನೀಡುವಂತಿದ್ದು, ಬಲವಂತದ ಲೈಂಗಿಕ ಚಟುವಟಿಕೆಗಳು, ಗುಪ್ತಾಂಗಗಳ ಅಶ್ಲೀಲ ವರ್ಣನೆ ಇರುತ್ತದೆ. ನರ್ಸ್ ಗಳನ್ನು ಸದಾ ಕೈಗೆಟುಕುವ ಮತ್ತು ಲೈಂಗಿಕಾಸಕ್ತಿ ಹೊಂದಿದವರು ಎಂದು ಬಿಂಬಿಸಲಾಗುತ್ತದೆ. ಜತೆಗೆ ವೈದ್ಯರಿಂದ ಲೈಂಗಿಕ ಕಿರುಕುಳಕ್ಕೆ ಸದಾ ಒಳಗಾಗುತ್ತಿರುತ್ತಾರೆ ಎಂದು ವಿವರಿಸಲಾಗಿದೆ, ಇದು ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವಂಥದ್ದು ಎಂದು ಕ್ಯಾಂಪಸ್ ಆಫ್ ಬಿಲೋಂಗಿಂಗ್' ಎಂಬ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಬ್ಲಾಂಕ್ ನಾಯ್ಸ್ನ ಸಂಸ್ಥಾಪಕಿ ಜಾಸ್ಮೀನ್ ಪಥೇಜಾ ಹೇಳುತ್ತಾರೆ.