AFSPA ಹಿಂಪಡೆಯುವಂತೆ ಮಣಿಪುರ ಸರ್ಕಾರದಿಂದ ಕೇಂದ್ರಕ್ಕೆ ಒತ್ತಾಯ
ಇಂಫಾಲ್: ರಾಜ್ಯದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಿಧಿಸಿರುವ ಎಎಫ್ಎಸ್ಪಿಎ(AFSPA)ನ್ನು ಪರಿಶೀಲಿಸಿ ಹಿಂಪಡೆಯುವಂತೆ ಮಣಿಪುರ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಣಿಪುರದ ಕೆಲ ಭಾಗಗಳಲ್ಲಿ ಹಿಂಸಾಚಾರ ಮುಂದುವರಿಕೆ ಹಿನ್ನೆಲೆ ಕೇಂದ್ರ ಸರಕಾರ ಸಶಸ್ತ್ರ ಪಡೆಗಳ(ವಿಶೇಷ ಅಧಿಕಾರ) ಕಾಯ್ದೆ-1958ನ್ನು ಜಿರಿಬಾಮ್ ಸೇರಿದಂತೆ ಮಣಿಪುರದ ಆರು ಪೊಲೀಸ್ ಠಾಣಾ ಪ್ರದೇಶಗಳಲ್ಲಿ ವಿಧಿಸಿತ್ತು.
ಮಣಿಪುರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಶನಿವಾರ ಕೇಂದ್ರ ಸರಕಾರಕ್ಕೆ ಈ ಕುರಿತು ಪತ್ರ ಬರೆದಿದ್ದು, ರಾಜ್ಯ ಸಚಿವ ಸಂಪುಟವು ನವೆಂಬರ್ 15ರಂದು ನಡೆದ ತನ್ನ ಸಭೆಯಲ್ಲಿ ಎಎಫ್ಎಸ್ಪಿಎ ಮತ್ತೆ ಏರಿಕೆ ಬಗ್ಗೆ ಚರ್ಚಿಸಿದೆ ಮತ್ತು ಈ ಕುರಿತು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮತ್ತು ಹಿಂಪಡೆಯುವಂತೆ ಆಗ್ರಹಿಸಲು ನಿರ್ಧರಿಸಿದೆ. AFSPA -1958ರ ಸೆಕ್ಷನ್ 3ರ ಅಡಿಯಲ್ಲಿ ರಾಜ್ಯದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ತೊಂದರೆಗೊಳಗಾದ(ಹಿಂಸಾಚಾರ ಪೀಡಿತ) ಪ್ರದೇಶಗಳೆಂದು ಘೋಷಿಸಿದ ಘೋಷಣೆಯನ್ನುಸಾರ್ವಜನಿಕರ ಹಿತದೃಷ್ಟಿಯಿಂದ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ನವೆಂಬರ್ 14ರಂದು ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಕ್ಮೈ ಮತ್ತು ಲಾಮ್ಸಾಂಗ್, ಇಂಫಾಲ್ ಪೂರ್ವ ಜಿಲ್ಲೆಯ ಲಾಮ್ಲೈ, ಬಿಷ್ಣುಪುರ್ನ ಮೊಯಿರಾಂಗ್, ಕಾಂಗ್ಪೋಕ್ಪಿಯ ಲೈಮಾಖೋಂಗ್ ಮತ್ತು ಜಿರಿಬಾಮ್ ನಲ್ಲಿ AFSPAಯನ್ನು ಮರು ವಿಧಿಸಿತ್ತು.