ಸಗಣಿ ರಾಶಿಯಲ್ಲಿ ರೂ. 20 ಲಕ್ಷಕ್ಕೂ ಹೆಚ್ಚು ನಗದು ಪತ್ತೆ!
ಬಾಲಸೋರ್: ಹೈದರಾಬಾದ್ ಮತ್ತು ಒಡಿಶಾ ಪೊಲೀಸರು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಸಗಣಿಯಲ್ಲಿ ರೂ. 20 ಲಕ್ಷಕ್ಕೂ ಹೆಚ್ಚು ನಗದು ಪತ್ತೆಯಾಗಿರುವ ಘಟನೆ ಬಾಲಸೋರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಮರ್ಡ ಪೊಲೀಸ್ ಠಾಣೆ ವ್ಯಾಪ್ತಿಯ ಬದಮಂದರುನಿ ಗ್ರಾಮದಿಂದ ಈ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಹೈದರಾಬಾದ್ ಹಾಗೂ ಒಡಿಶಾ ಪೊಲೀಸರ ತಂಡವೊಂದು ಗ್ರಾಮಕ್ಕೆ ಧಾವಿಸಿ, ಆರೋಪಿ ಗೋಪಾಲ್ ಬೆಹೆರಾ ಎಂಬಾತನ ಭಾಮೈದುನನ ಮನೆಯ ಮೇಲೆ ದಾಳಿ ನಡೆಸಿದೆ.
ಸದ್ಯ ಪರಾರಿಯಾಗಿರುವ ಅರೋಪಿ ಗೋಪಾಲ್, ಹೈದರಾಬಾದ್ ಮೂಲದ ಕೃಷಿಯಾಧಾರಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಆತ ಕಂಪನಿಯ ಲಾಕರ್ ನಿಂದ ರೂ. 20ಕ್ಕೂ ಹೆಚ್ಚು ನಗದನ್ನು ಕಳವು ಮಾಡಿದ್ದ ಎಂದು ಆರೋಪಿಸಲಾಗಿದೆ. ಆತ ತನ್ನ ಭಾಮೈದ ರಬೀಂದ್ರ ಬೆಹೆರಾ ಮೂಲಕ ಆ ಹಣವನ್ನು ತನ್ನ ಗ್ರಾಮಕ್ಕೆ ರವಾನಿಸಿದ್ದ ಎನ್ನಲಾಗಿದೆ.
ಈ ಸಂಬಂಧ ದಾಖಲಾದ ದೂರನ್ನು ಆಧರಿಸಿ, ಕಮರ್ಡ ಪೊಲೀಸರೊಂದಿಗೆ ಹೈದರಾಬಾದ್ ಪೊಲೀಸರು ರಬೀಂದ್ರನ ನಿವಾಸದ ಮೇಲೆ ದಾಳಿ ನಡೆಸಿ, ಸಗಣಿಯ ರಾಶಿಯಲ್ಲಿ ಬಚ್ಚಿಟ್ಟಿದ್ದ ಭಾರಿ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳದ ಗೋಪಾಲ್ ಹಾಗೂ ಆತನ ಭಾಮೈದ ರಬೀಂದ್ರ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ ಎಂದು ಕಮರ್ಡ ಪೊಲೀಸ್ ಠಾಣೆಯ ಐಐಸಿ ಪ್ರೇಮಡ ನಾಯಕ್ ತಿಳಿಸಿದ್ದಾರೆ.
ಸದ್ಯ, ಗ್ರಾಮದಿಂದ ಆರೋಪಿಗಳ ಕುಟುಂಬದ ಸದಸ್ಯನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದೂ ಅವರು ಹೇಳಿದ್ದಾರೆ.