ಉತ್ತರ ಪ್ರದೇಶ ಉದ್ಯೋಗ ನೇಮಕಾತಿ ಹಗರಣ: ವಿಧಾನಸಭೆ, ಪರಿಷತ್ ನಲ್ಲಿನ ಪ್ರಮುಖ ಹುದ್ದೆಗಳಿಗೆ ರಾಜಕಾರಣಿಗಳ, ಅಧಿಕಾರಿಗಳ ಸಂಬಂಧಿಗಳ ನೇಮಕ!
ಹೊಸದಿಲ್ಲಿ: ಉತ್ತರ ಪ್ರದೇಶ ವಿಧಾನಸಭಾ ಮತ್ತು ವಿಧಾನ ಪರಿಷತ್ ನಲ್ಲಿನ ಆಡಳಿತಾತ್ಮಕ ಹುದ್ದೆಗಳನ್ನು ಭರ್ತಿ ಮಾಡಲು 2020-2021ರಲ್ಲಿ ಪರೀಕ್ಷೆ ನಡೆಸಲಾಗಿತ್ತು, ಆದರೆ ಇದೀಗ ಈ ನೇಮಕಾತಿಯಲ್ಲಿ ಹಗರಣ ನಡೆದಿರುವುದು ಬಯಲಾಗಿದ್ದು, ಈ ಹುದ್ದೆಗಳಲ್ಲಿ ಐದನೇ ಒಂದು ಭಾಗವು ಅಧಿಕಾರಿಗಳ ಸಂಬಂಧಿಕರ ಪಾಲಾಗಿದೆ ಎನ್ನುವುದು ಬಯಲಾಗಿದೆ ಎಂದು indianexpress.com ವರದಿ ಮಾಡಿದೆ.
ಉತ್ತರಪ್ರದೇಶದ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿನ 186 ಖಾಲಿ ಹುದ್ದೆಗಳು ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಉತ್ತರ ಪ್ರದೇಶ ವಿಧಾನಸಭೆ ಮತ್ತು ಲೆಜಿಸ್ಲೇಟಿವ್ ಕೌನ್ಸಿಲ್ ನಲ್ಲಿದ್ದ ಆಡಳಿತಾತ್ಮಕ ಹುದ್ದೆಗಳಿಗಾಗಿ ಅಂದಾಜು 2.5 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಮೊದಲ ಕೋವಿಡ್ ಅಲೆಯ ವೇಳೆ ಈ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಉತ್ತರಪ್ರದೇಶದ ರಾಜಕಾರಣಿಗಳು ಮತ್ತು ಅಧಿಕಾರಿಗಳ 38 ಮಂದಿ ಸಂಬಂಧಿಕರು ಆಯ್ಕೆಯಾಗಿದ್ದಾರೆ, ಇದಲ್ಲದೆ ಎರಡು ಖಾಸಗಿ ಸಂಸ್ಥೆಗಳ ಮಾಲಕರ ಐವರು ಸಂಬಂಧಿಕರಿಗೆ ಹುದ್ದೆಯನ್ನು ನೀಡಲಾಗಿದೆ.
ಉದ್ಯೋಗವನ್ನು ಪಡೆದುಕೊಂಡವರಲ್ಲಿ ಉತ್ತರಪ್ರದೇಶದ ಸ್ಪೀಕರ್ ಅವರ PRO ಮತ್ತು ಅವರ ಸಹೋದರ, ಓರ್ವ ಮಂತ್ರಿಯ ಸೋದರಳಿಯ, ವಿಧಾನ ಪರಿಷತ್ ಕಾರ್ಯದರ್ಶಿಯ ಪುತ್ರ, ವಿಧಾನಸಭಾ ಕಾರ್ಯದರ್ಶಿಯ ನಾಲ್ವರು ಸಂಬಂಧಿಕರು, ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯ ಪುತ್ರ ಮತ್ತು ಪುತ್ರಿ, ಉಪ ಲೋಕಾಯುಕ್ತರೊಬ್ಬರ ಪುತ್ರ, ಇಬ್ಬರು ಮುಖ್ಯಮಂತ್ರಿಗಳಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ಮಾಜಿ ಅಧಿಕಾರಿಯ ಪುತ್ರ, ಟಿಎಸ್ಆರ್ ಡೇಟಾ ಸಂಸ್ಕರಣೆ ಮತ್ತು ರಾಭವ್ ಎಂಬ ಎರಡು ಖಾಸಗಿ ಸಂಸ್ಥೆಗಳ ಮಾಲಕರ ಸಂಬಂಧಿಕರಾದ ಕನಿಷ್ಠ ಐದು ಮಂದಿ ಸೇರಿದ್ದಾರೆ.
2023ರ ಸೆಪ್ಟೆಂಬರ್ 18ರಂದು ಸುಶೀಲ್ ಕುಮಾರ್, ಅಜಯ್ ತ್ರಿಪಾಠಿ ಮತ್ತು ಅಮರೀಶ್ ಕುಮಾರ್ ಎಂಬ ಮೂವರು ಪರಾಜಿತ ಅಭ್ಯರ್ಥಿಗಳು ಈ ಕುರಿತು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು, ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ದ್ವಿಸದಸ್ಯ ಪೀಠವು ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಈ ಪ್ರಕ್ರಿಯೆಯನ್ನು ಆಘಾತಕಾರಿ ಮತ್ತು ನೇಮಕಾತಿ ಹಗರಣಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿತ್ತು. ಆ ಬಳಿಕ ವಿಧಾನಪರಿಷತ್ ನ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ತಡೆ ನೀಡಿದೆ. ಈ ಕುರಿತು ಮುಂದಿನ ವಿಚಾರಣೆಯನ್ನು 2025ರ ಜ.6ಕ್ಕೆ ನಿಗದಿಪಡಿಸಲಾಗಿದೆ.
ಈ ನೇಮಕಾತಿಗಳಲ್ಲಿ ಕನಿಷ್ಠ 15 ಪರಿಶೀಲನಾ ಅಧಿಕಾರಿಗಳ (RO) ಹುದ್ದೆಗಳು, 27 ಸಹಾಯಕ ಪರಿಶೀಲನಾ ಅಧಿಕಾರಿ(ARO)ಗಳು ಮತ್ತು ಜೂನಿಯರ್ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. RO ಗೆಜೆಟೆಡ್ ಹುದ್ದೆಗೆ ಸಮನಾಂತರ ಹುದ್ದೆಯಾಗಿದೆ. ಈ ಹುದ್ದೆಗೆ 47,600ರೂ ನಿಂದ 1,51,100ರೂ.ವರೆಗೆ ವೇತನ ನೀಡಲಾಗುತ್ತದೆ. ಸಹಾಯಕ RO(ARO )ಹುದ್ದೆಗೆ 44,900ರೂ. ನಿಂದ 1,42,400ರೂ.ವರೆಗೆ ವೇತನ ನೀಡಲಾಗುತ್ತದೆ.
indianexpress.com ವರದಿಯ ಪ್ರಕಾರ, ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ದುಬೆ ಅವರ ನಾಲ್ವರು ಸಂಬಂಧಿಕರು, ಉತ್ತರ ಪ್ರದೇಶ ಸಂಸದೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಜೈ ಪ್ರಕಾಶ್ ಸಿಂಗ್ ಅವರ ಪುತ್ರ ಮತ್ತು ಪುತ್ರಿ, ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಸಿಂಗ್ ಅವರ ಪುತ್ರ, ಮಾಜಿ ಸಚಿವ ಮಹೇಂದ್ರ ಸಿಂಗ್ ಅವರ ಸೋದರಳಿಯ, ಉಪ ಲೋಕಾಯುಕ್ತ ಮತ್ತು ಯುಪಿ ಕಾನೂನು ಇಲಾಖೆ ಮಾಜಿ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಮಾರ್ ಸಿಂಗ್ ಅವರ ಪುತ್ರ, ಮುಖ್ಯಂತ್ರಿಯಾಗಿದ್ದಾಗ ಅಖಿಲೇಶ್ ಯಾದವ್ ಮತ್ತು ಯೋಗಿ ಆದಿತ್ಯನಾಥ್ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ಅಜಯ್ ಕುಮಾರ್ ಸಿಂಗ್ ಅವರ ಪುತ್ರ, ಮಾಜಿ ಸಚಿವ ಮತ್ತು ಎಸ್ಪಿ ನಾಯಕ ಶಿವಪಾಲ್ ಯಾದವ್ ಅವರೊಂದಿಗೆ ಕೆಲಸ ಮಾಡಿದ್ದ ಧರ್ಮೇಂದ್ರ ಸಿಂಗ್ ಅವರ ಪುತ್ರ ಮತ್ತು ಸಹೋದರ, ಮಾಜಿ ಸಿಎಂ ಅಖಿಲೇಶ್ ಯಾದವ್ ಅವರ ನಿಕಟವರ್ತಿ ಜೈನೇಂದ್ರ ಸಿಂಗ್ ಯಾದವ್ ಅವರ ಸೋದರಳಿಯ ಈ ಉದ್ಯೋಗವನ್ನು ಪಡೆದುಕೊಂಡಿದ್ದಾರೆ.
ಈ ನೇಮಕಾತಿಯ ವೇಳೆ ಉತ್ತರಪ್ರದೇಶದ ವಿಧಾನಸಭೆಯ ಸ್ಪೀಕರ್ ಆಗಿದ್ದ ಎಚ್ ಎನ್ ದೀಕ್ಷಿತ್ ಈ ನೇಮಕಾತಿಯಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ.