ಅಮರಾವತಿ: ಬಿಜೆಪಿಯ ನವನೀತ್ ರಾಣಾ ಭಾಗವಹಿಸಿದ್ದ ರ‍್ಯಾಲಿಯಲ್ಲಿ ಕುರ್ಚಿಗಳನ್ನು ಎಸೆದು ದಾಂಧಲೆ
ಅಮರಾವತಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಶನಿವಾರ ರಾತ್ರಿ ಬಿಜೆಪಿ ನಾಯಕಿ ಮತ್ತು ಮಾಜಿ ಸಂಸದೆ ನವನೀತ್ ರಾಣಾ ಅವರು ಭಾಗವಹಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಗುಂಪೊಂದು ಕುರ್ಚಿಗಳನ್ನು ಎಸೆದು ದಾಂಧಲೆ ಸೃಷ್ಟಿಸಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಮರಾವತಿಯ ಖಲ್ಲರ್ ಗ್ರಾಮದಲ್ಲಿ ನಡೆದ ರ‍್ಯಾಲಿಯಲ್ಲಿ ಜನರ ಗುಂಪೊಂದು ಕುರ್ಚಿಗಳನ್ನು ಎಸೆಯುತ್ತಿರುವುದು ಮತ್ತು ರಾಣಾ ಅವರನ್ನು ಅವರ ಬೆಂಬಲಿಗರು ಸುತ್ತುವರೆದಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. ಕೆಲವರು ನವನೀತ್ ರಾಣಾ ಅವರನ್ನು ಗುರಿಯಾಗಿಸಿಕೊಂಡು ಕುರ್ಚಿಗಳನ್ನು ಎಸೆಯುತ್ತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಗಳು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.
ಘಟನೆಯ ಬಳಿಕ ನವನೀತ್ ರಾಣಾ ಪೊಲೀಸ್ ಠಾಣೆಗೆ ತೆರಳಿ ಗಲಾಟೆ ಮಾಡಿದವರನ್ನು ಬಂಧಿಸಬೇಕುಂದು ಒತ್ತಾಯಿಸಿದ್ದಾರೆ. ಪೊಲೀಸರು ಈ ಕುರಿತು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದಾರೆ.
ನಾವು ಖಲ್ಲಾರ್ನಲ್ಲಿ ಶಾಂತಿಯುತವಾಗಿ ಪ್ರಚಾರ ಮಾಡುತ್ತಿದ್ದೆವು, ಆದರೆ ನನ್ನ ಭಾಷಣದ ಸಮಯದಲ್ಲಿ ಕೆಲವರು ಅಶ್ಲೀಲ ಸನ್ನೆಗಳನ್ನು ಮಾಡಲು ಪ್ರಾರಂಭಿಸಿದರು. ಆದರೂ ನಾನು ಪ್ರತಿಕ್ರಿಯಿಸಲಿಲ್ಲ, ನಂತರ ಅವರು ಘೋಷಣೆಗಳನ್ನು ಕೂಗಿ ಕುರ್ಚಿಗಳನ್ನು ಎಸೆದಿದ್ದಾರೆ ಎಂದು ನವನೀತ್ ರಾಣಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನನ್ನೊಂದಿಗೆ ಇದ್ದ ಪಕ್ಷದ ಕೆಲವು ಪದಾಧಿಕಾರಿಗಳು ಗಾಯಗೊಂಡಿದ್ದಾರೆ. ಇದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ನನ್ನೊಂದಿಗೆ ಇದ್ದ ಆರು ಭದ್ರತಾ ಸಿಬ್ಬಂದಿ ನನ್ನನ್ನು ರಕ್ಷಿಸಿದ್ದಾರೆ. ನಾನು ಈ ಬಗ್ಗೆ ದೂರು ನೀಡಿದ್ದೇನೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಅಮರಾವತಿಯ ಇಡೀ ಹಿಂದೂ ಸಮುದಾಯ ಇಲ್ಲಿ ಸೇರಲಿದೆ ಎಂದು ನವನೀತ್ ರಾಣಾ ಎಚ್ಚರಿಕೆ ನೀಡಿದ್ದಾರೆ.