ದಿಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ಐಎಎಸ್ ಆಕಾಂಕ್ಷಿಗಳ ಸಾವು: ತನಿಖೆಗೆ ಗೃಹ ಸಚಿವಾಲಯದಿಂದ ಸಮಿತಿ ರಚನೆ
ಹೊಸದಿಲ್ಲಿ: ದಿಲ್ಲಿಯ ಜನಪ್ರಿಯ ನಾಗರಿಕ ಸೇವಾ ತರಬೇತಿ ಕೇಂದ್ರವೊಂದರ ನೆಲ ಅಂತಸ್ತಿಗೆ ಪ್ರವಾಹದ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿರುವ ಘಟನೆಯ ಕುರಿತು ತನಿಖೆ ನೆಡಸಲು ಕೇಂದ್ರ ಸರಕಾರವು ಸಮಿತಿಯೊಂದನ್ನು ರಚಿಸಿದೆ.
ಗೃಹ ವ್ಯವಹಾರಗಳ ಸಚಿವಾಲಯವು ರಚಿಸಿರುವ ಈ ಸಮಿತಿಯು 30 ದಿನಗಳೊಳಗಾಗಿ ತನ್ನ ವರದಿಯನ್ನು ಸಲ್ಲಿಸಲಿದೆ.
ಈ ಸಮಿತಿಯು ಘಟನೆಯ ಕಾರಣಗಳು, ಹೊಣೆಗಾರಿಕೆ ನಿಗದಿ, ಕ್ರಮಗಳ ಸಲಹೆ ಹಾಗೂ ನೀತಿ ಬದಲಾವಣೆಯ ಕುರಿತು ಶಿಫಾರಸು ಮಾಡಲಿದೆ ಎಂದು ಗೃಹ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಈ ಸಮಿತಿಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಲ್ಲದೆ, ದಿಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿ (ಗೃಹ), ದಿಲ್ಲಿ ಪೊಲೀಸ್ ಇಲಾಖೆಯ ವಿಶೇಷ ಪೊಲೀಸ್ ಆಯುಕ್ತರು ಹಾಗೂ ಅಗ್ನಿಶಾಮಕ ಸಲಹೆಗಾರರು ಸದಸ್ಯರಾಗಿರಲಿದ್ದಾರೆ. ಇದರೊಂದಿಗೆ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಈ ಸಮಿತಿಯ ಸಂಚಾಲಕರಾಗಿರಲಿದ್ದಾರೆ.
ಶನಿವಾರ ರಾತ್ರಿ ಹಳೆಯ ರಾಜಿಂದರ್ ನಗರ್ ನಲ್ಲಿರುವ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್ ನ ನೆಲ ಅಂತಸ್ತಿಗೆ ಪ್ರವಾಹದ ನೀರು ನುಗ್ಗಿದ್ದರಿಂದ ಉತ್ತರ ಪ್ರದೇಶದ ಗಾಝಿಯಾಬಾದ್ ನ ಶ್ರೇಯಾ ಯಾದವ್ (25), ತೆಲಂಗಾಣದ ತನ್ಯ ಸೋನಿ (25) ಹಾಗೂ ಕೇರಳದ ಎರ್ನಾಕುಲಂನ ನೆವಿನ್ ಡೆಲ್ವಿನ್ (25) ಎಂಬ ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿದ್ದರು.