ವಿದೇಶಿ ನಿಧಿಯನ್ನು ಸ್ವೀಕರಿಸುವ ಎನ್ ಜಿ ಒ ಗಳಿಂದ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಘೋಷಣೆ ಕಡ್ಡಾಯ
ಹೊಸದಿಲ್ಲಿ: ಕೇಂದ್ರವು ನಿಯಮಗಳಿಗೆ ತಿದ್ದುಪಡಿಯೊಂದನ್ನು ಇತ್ತೀಚಿಗೆ ಅಧಿಸೂಚಿಸಿದ್ದು, ಅದರಂತೆ ವಿದೇಶಿ ನಿಧಿಗಳನ್ನು ಸ್ವೀಕರಿಸುವ ಸರಕಾರೇತರ ಸಂಸ್ಥೆ (ಎನ್ ಜಿ ಒ)ಗಳು ಈ ದೇಣಿಗೆಗಳಿಂದ ಖರೀದಿಸಲಾದ ಚರಾಸ್ತಿಗಳು ಮತ್ತು ಸ್ತಿರಾಸ್ತಿಗಳನ್ನು ಪ್ರತಿ ವರ್ಷ ಘೋಷಿಸಬೇಕಿದೆ.
ಕೇಂದ್ರ ಗೃಹ ಸಚಿವಾಲಯವು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯಡಿ ನಿಯಮಗಳಿಗೆ ತಿದ್ದುಪಡಿಗೊಳಿಸಿ ಸೋಮವಾರ ಗೆಝೆಟ್ ಅಧಿಸೂಚನೆಯನ್ನು ಹೊರಡಿಸಿದೆ. ವಿದೇಶಿ ನಿಧಿಗಳನ್ನು ಸ್ವೀಕರಿಸಲು ಭಾರತದಲ್ಲಿಯ ಲಾಭೋದ್ದೇಶವಿಲ್ಲದ ಸಂಸ್ಥೆಗಳು ಕಾಯ್ದೆಯಡಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ತಿದ್ದುಪಡಿಗಳ ಮೂಲಕ ಕೇಂದ್ರವು ಎನ್ಜಿಒಗಳು ಕಾಯ್ದೆಯಡಿ ತಮ್ಮ ವಾರ್ಷಿಕ ರಿಟರ್ನ್ಗಳ ಭಾಗವಾಗಿ ಸಲ್ಲಿಸಬೇಕಿರುವ ನಮೂನೆ ಎಫ್ ಸಿ-4 ಅನ್ನು ಪರಿಷ್ಕರಿಸಿದ್ದು,ಎರಡು ಕೋಷ್ಟಕಗಳನ್ನು ಪರಿಚಯಿಸಿದೆ.
ವಿದೇಶಿ ನಿಧಿಗಳಿಂದ ಖರೀದಿಸಿರುವ ಚರಾಸ್ತಿಗಳಿಗೆ ಮೊದಲ ಕೋಷ್ಟಕವು ಸಂಬಂಧಿಸಿದ್ದರೆ ಎರಡನೇ ಕೋಷ್ಟಕವು ಸ್ಥಿರಾಸ್ತಿಗಳಿಗೆ ಸಂಬಂಧಿಸಿದೆ. ಹಣಕಾಸು ವರ್ಷದ ಆರಂಭದಲ್ಲಿ ಆಸ್ತಿಗಳ ವೌಲ್ಯ,ಆ ವರ್ಷದಲ್ಲಿ ಖರೀದಿಸಲಾದ ಮತ್ತು ಮಾರಾಟ ಮಾಡಲಾದ ಆಸ್ತಿಗಳ ವೌಲ್ಯ,ಸ್ಥಿರಾಸ್ತಿಗಳಿರುವ ತಾಣ ಇತ್ಯಾದಿ ವಿವರಗಳನ್ನು ಎನ್ಜಿಒಗಳು ಸಲ್ಲಿಸಬೇಕಾಗುತ್ತದೆ.
ಈ ಮೊದಲು ನಮೂನೆ 4ರಲ್ಲಿ ಸಂಬಂಧಿಸಿದ ಹಣಕಾಸು ವರ್ಷದಲ್ಲಿ ಹೊಸದಾಗಿ ಖರೀದಿಸಲಾದ ಆಸ್ತಿಗಳ ಮಾಹಿತಿಯನ್ನು ಮಾತ್ರ ಕೇಳಲಾಗುತ್ತಿತ್ತು.
ಸೋಮವಾರ ಕೇಂದ್ರವು ಕಾಯ್ದೆಯಡಿ ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ನೋಂದಣಿ ಪ್ರಮಾಣಪತ್ರಗಳ ಮಾನ್ಯತೆಯನ್ನೂ ಆರು ತಿಂಗಳಿಗೆ ವಿಸ್ತರಿಸಿದೆ. ಇದು ಈ ಹಿಂದೆ ಸೆ.30ರವರೆಗೆ ಮಾನ್ಯತೆ ವಿಸ್ತರಿಸಲ್ಪಟ್ಟಿದ್ದ ಮತ್ತು ನವೀಕರಣ ಅರ್ಜಿಗಳು ಬಾಕಿಯುಳಿದಿರುವ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಅ.1 ಮತ್ತು 2024, ಮಾ.31ಕ್ಕೆ ನಡುವೆ ಮಾನ್ಯತೆ ಅವಧಿ ಅಂತ್ಯಗೊಳ್ಳುವ ಸಂಸ್ಥೆಗಳಿಗೂ ಇದು ಅನ್ವಯಿಸುತ್ತದೆ.