ಸೆ. 30ರೊಳಗೆ ಆಸ್ತಿ ಘೋಷಣೆ ಮಾಡದಿದ್ದರೆ ವೇತನವಿಲ್ಲ: ಸರಕಾರಿ ನೌಕರರಿಗೆ ಉತ್ತರ ಪ್ರದೇಶ ಸರಕಾರ ಎಚ್ಚರಿಕೆ

Update: 2024-09-24 08:03 GMT

ಸಾಂದರ್ಭಿಕ ಚಿತ್ರ (Photo credit: Meta AI)

ಲಕ್ನೊ: ಸೆಪ್ಟೆಂಬರ್ 30ರೊಳಗೆ ಸರಕಾರಿ ನೌಕರರು ತಮ್ಮ ಸ್ಥಿರ ಮತ್ತು ಚರಾಸ್ತಿಗಳನ್ನು ಘೋಷಿಸಿಕೊಳ್ಳಬೇಕು, ಇಲ್ಲದಿದ್ದರೆ ಅವರ ವೇತನಗಳನ್ನು ತಡೆಹಿಡಿಯಲಾಗುವುದು ಎಂದು ಉತ್ತರ ಪ್ರದೇಶ ಸರಕಾರವು ಆದೇಶಿಸಿದೆ. ಸರಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಹೊರಡಿಸಿರುವ ಆದೇಶದ ಪ್ರಕಾರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಸೆಪ್ಟೆಂಬರ್ 30ರೊಳಗೆ ‘ಮಾನವ್ ಸಂಪದ ಪೋರ್ಟಲ್’ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಬೇಕಿದೆ.

ಈ ಆದೇಶಕ್ಕೆ ಒಳಪಟ್ಟಿರುವ ಅಧಿಕಾರಿಗಳ ಕುರಿತು ಕಾಲಕಾಲಕ್ಕೆ ಪರಾಮರ್ಶೆ ನಡೆಸುವ ಹೊಣೆಗಾರಿಕೆಯನ್ನು ಹಿಂಪಡೆಯುವಿಕೆ ಮತ್ತು ವಿತರಣಾಧಿಕಾರಿ (ಡಿಡಿಒ)ಗೆ ರಾಜ್ಯ ಸರಕಾರ ವಹಿಸಿದೆ.

ತಮ್ಮ ಆಸ್ತಿ ವಿವರಗಳನ್ನು ಈ ಪೋರ್ಟಲ್ ನಲ್ಲಿ ಒದಗಿಸುವ ಅಧಿಕಾರಿಗಳಿಗೆ ಮಾತ್ರ ಸೆಪ್ಟೆಂಬರ್ ತಿಂಗಳ ವೇತನವನ್ನು ವಿತರಿಸಲಾಗುತ್ತದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಶೇ. 90ರಷ್ಟು ರಾಜ್ಯ ಸರಕಾರಿ ನೌಕರರು ತಮ್ಮ ಆಸ್ತಿ ವಿವರಗಳನ್ನು ಈಗಾಗಲೇ ಒದಗಿಸಿದ್ದಾರೆ. ಅಂದರೆ, 8.44 ಲಕ್ಷ ಸರಕಾರಿ ನೌಕರರ ಪೈಕಿ 7.19 ಲಕ್ಷ ಸರಕಾರಿ ನೌಕರರು ತಮ್ಮ ಆಸ್ತಿ ವಿವರಗಳನ್ನು ಈಗಾಗಲೇ ಈ ಪೋರ್ಟಲ್ ನಲ್ಲಿ ಘೋಷಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ, ಸರಕಾರಿ ನೌಕರರು ತಮ್ಮ ಆಸ್ತಿ ವಿವರಗಳನ್ನು ಆಗಸ್ಟ್ 31ರೊಳಗೆ ಘೋಷಿಸಿಕೊಳ್ಳಬೇಕು ಎಂದು ಗಡುವು ವಿಧಿಸಲಾಗಿತ್ತು. ಆದರೆ, ರಾಜ್ಯ ಸರಕಾರಿ ನೌಕರರ ಮನವಿಯ ಮೇರೆಗೆ ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News