ಪಂಜಾಬ್:‌ ವಿದ್ಯಾರ್ಥಿನಿಯರ ನಿಲಯ ತಪಾಸಣೆ ಮಾಡಿದ ಕುಲಪತಿ, ಭುಗಿಲೆದ್ದ ಪ್ರತಿಭಟನೆ

Update: 2024-09-24 07:58 GMT

PC: x.com/ThePrintIndia

ಪಾಟಿಯಾಲ: ಇಲ್ಲಿನ ರಾಜೀವ್‍ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಪೂರ್ವಮಾಹಿತಿ ಇಲ್ಲದೇ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ದಿಢೀರ್ ಭೇಟಿ ನೀಡಿ ತಪಾಸಣೆಯನ್ನು ಕೈಗೊಂಡ ಕುಲಪತಿಗಳ ಕ್ರಮವನ್ನು ಖಂಡಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ಆರಂಭಿಸಿದ್ದಾರೆ.

ಕುಲಪತಿಗಳು ಯಾವುದೇ ಮಾಹಿತಿ ನೀಡದೇ, ಒಪ್ಪಿಗೆ ಪಡೆಯದೇ ವಿದ್ಯಾರ್ಥಿನಿಯರ ವಸತಿಗೃಹ ಪ್ರವೇಶಿಸಿದ್ದು, ವಿದ್ಯಾರ್ಥಿನಿಯರ ಬಟ್ಟೆ ಬರೆಗಳ ಬಗ್ಗೆ ಅಸಭ್ಯ ಹೇಳಿಕೆ ನೀಡಿದ್ದಾರೆ ಎನ್ನುವುದು ಪ್ರತಿಭಟನಾ ನಿರತರ ಆರೋಪ.

ವಿದ್ಯಾರ್ಥಿನಿಯರ ಹಾಸ್ಟೆಲ್ ಮೆಸ್ ತಪಾಸಣೆ ಮಾಡುವ ಉದ್ದೇಶದಿಂದ ಮತ್ತು ಮೊದಲ ವರ್ಷದ ವಿದ್ಯಾರ್ಥಿನಿಯರ ವಸತಿ ವ್ಯವಸ್ಥೆ ಸರಿಪಡಿಸಲು ಭೇಟಿ ನೀಡಿದ್ದಾಗಿ ಕುಲಪತಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ ವಿವಿ ಮಾರ್ಗಸೂಚಿಯ ಪ್ರಕಾರ, ವಿದ್ಯಾರ್ಥಿನಿಯರ ವಸತಿನಿಲಯ ಆವರಣಕ್ಕೆ ಮಹಿಳೆಯರು ಮಾತ್ರ ಪ್ರವೇಶಿಸಬಹುದು. ಪೋಷಕರಿಗೂ ಅವಕಾಶವಿಲ್ಲ ಎನ್ನುವುದು ವಿದ್ಯಾರ್ಥಿಗಳ ಪ್ರತಿಪಾದನೆ.

ತಪಾಸಣೆ ಬಗ್ಗೆ ವಿಸಿ ಮೊದಲು ವಿದ್ಯಾರ್ಥಿನಿಯರಿಗಾಗಲೀ, ವಾರ್ಡನ್‍ಗಾಗಲೀ ಮಾಹಿತಿ ನೀಡಿಲ್ಲ. ಯಾವುದೇ ಮಹಿಳಾ ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿ ಅವರ ಜತೆಗೆ ಇರಲಿಲ್ಲ. ವಿದ್ಯಾರ್ಥಿನಿಯರ ಕೊಠಡಿಗೂ ವಿಸಿ ಪ್ರವೇಶಿಸಿದ್ದಾರೆ. ಈ ಭೇಟಿಯ ಬಗ್ಗೆ ಮಾಹಿತಿ ಇಲ್ಲದ ವಿದ್ಯಾರ್ಥಿನಿಯರು ತೀರಾ ಮುಜುಗರಕ್ಕೆ ಒಳಗಾದರು. ಉದಾಹರಣೆಗೆ ಸ್ನಾನ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನೇರವಾರಿ ಕುಲಪತಿಗಳನ್ನು ಪ್ರಶ್ನಿಸಿದಳು. ಆಗ ವಿದ್ಯಾರ್ಥಿನಿಯರು ನನ್ನ ಮಕ್ಕಳಂತೆ. ತಪ್ಪಾಗಿ ವರ್ತಿಸುವುದಿಲ್ಲ ಎಂದು ವಿಸಿ ಸಮುಜಾಯಿಷಿ ನೀಡಿದ್ದಾಗಿ ವಿದ್ಯಾರ್ಥಿಗಳು ಆಪಾದಿಸಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ವಿಶ್ವವಿದ್ಯಾನಿಲಯಕ್ಕೆ ರಜೆ ಘೋಷಿಸಲಾಗಿದೆ ಮತ್ತು ವಿದ್ಯಾರ್ಥಿಗಳು ಮನೆಗಳಿಗೆ ತೆರಳಲು ಅವಕಾಶ ನೀಡಲಾಗಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Full View

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News