ಡೆಹ್ರಾಡೂನ್: ಮದುವೆಯಾಗಲು ಒತ್ತಡ ಹಾಕುತ್ತಿದ್ದ ನೇಪಾಳಿ ಮಹಿಳೆಯನ್ನು ಹತ್ಯೆಗೈದ ಸೇನಾಧಿಕಾರಿಯ ಬಂಧನ
ಡೆಹ್ರಾಡೂನ್: ಪಶ್ಚಿಮ ಬಂಗಾಳದ ಸಿಲಿಗುರಿಯ ಡ್ಯಾನ್ಸ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳಿ ಮಹಿಳೆಯನ್ನು ಡೆಹ್ರಾಡೂನ್ ಗೆ ಕರೆತಂದು ಹತ್ಯೆಗೈದ ಆರೋಪದಲ್ಲಿಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಿಯೋಜಿತ ಸೇನೆಯ ಲೆಫ್ಟಿನೆಂಟ್ ಕರ್ನಲ್ ಅನ್ನು ಬಂಧಿಸಲಾಗಿದೆ ಎಂದು ಡೆಹ್ರಾಡೂನ್ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸರ್ವಲ್ ಗಡ್ ಪ್ರದೇಶದಲ್ಲಿ ಮಹಿಳೆಯ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದ 24 ಗಂಟೆಗಳ ಒಳಗೆ ಪ್ರಕರಣ ಬೇಧಿಸಲಾಗಿದೆ.
ಮಹಿಳೆ ನೇಪಾಳದವರಾಗಿದ್ದು, ಸಿಲಿಗುರಿಯಲ್ಲಿ ವಾಸವಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಕ್ಲೆಮೆಂಟ್ ಟೌನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ರಾಮೇಂದು ಉಪಾಧ್ಯಾಯ ವಿವಾಹೇತರ ಸಂಬಂಧ ಹೊಂದಿದ್ದ 30 ವರ್ಷದ ನೇಪಾಳಿ ಮಹಿಳೆಯು ಮದುವೆಯಾಗುವಂತೆ ತನ್ನ ಮೇಲೆ ಒತ್ತಡ ಹೇರಲು ಆರಂಭಿಸಿದ ನಂತರ ಆಕೆಯನ್ನು ಕೊಂದಿದ್ದಾನೆ. ಪ್ರೇಮನಗರದ ಮನೆಯಿಂದ ಉಪಾಧ್ಯಾಯನನ್ನು ಬಂಧಿಸಲಾಗಿದೆ.
ಹತ್ಯೆಯಾದ ಶ್ರೇಯಾ ಶರ್ಮಾ ಸಿಲಿಗುರಿಯ ಡ್ಯಾನ್ಸ್ ಬಾರ್ ನಲ್ಲಿ ಆರೋಪಿಯನ್ನು ಭೇಟಿಯಾಗಿದ್ದರು, ನಂತರ ಅವರ ಸಂಬಂಧ ಮೂರು ವರ್ಷಗಳ ಕಾಲ ಮುಂದುವರೆಯಿತು. ಸೇನಾಧಿಕಾರಿ ಡೆಹ್ರಾಡೂನ್ ಗೆ ವರ್ಗಾವಣೆಯಾದಾಗ ಶ್ರೇಯಾಳನ್ನು ಡೆಹ್ರಾಡೂನ್ ಗೆ ತನ್ನೊಂದಿಗೆ ಕರೆತಂದು ಬಾಡಿಗೆಗೆ ಫ್ಲಾಟ್ ವಾಸವಾಗಿರುವ ವಿಚಾರವನ್ನು ವಿಚಾರಣೆಯ ಸಮಯದಲ್ಲಿ ಉಪಾಧ್ಯಾಯ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪಾಧ್ಯಾಯ ಶನಿವಾರ ರಾತ್ರಿ ಕ್ಲಬ್ ನಲ್ಲಿ ಮಹಿಳೆಯೊಂದಿಗೆ ಮದ್ಯ ಸೇವಿಸಿ ಆಕೆಯನ್ನು ಲಾಂಗ್ ಡ್ರೈವ್ ಗೆ ಕರೆದೊಯ್ಯುವ ನೆಪದಲ್ಲಿ ನಗರದ ಹೊರವಲಯದಲ್ಲಿರುವ ನಿರ್ಜನ ಪ್ರದೇಶವಾದ ಥಾನೋ ರಸ್ತೆ ತಲುಪಿದ ಬಳಿಕ ರಾತ್ರಿ 1:30ರ ಸುಮಾರಿಗೆ ಕಾರು ನಿಲ್ಲಿಸಿ ಮಹಿಳೆಯ ತಲೆಗೆ ಸುತ್ತಿಗೆಯಿಂದ ಪದೇ ಪದೇ ಹೊಡೆದು ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೇಯಾಳನ್ನು ಕೊಂದ ನಂತರ ಉಪಾಧ್ಯಾಯ ಆಕೆಯ ಶವವನ್ನು ರಸ್ತೆಬದಿಯಲ್ಲಿ ಎಸೆದು ಓಡಿದ್ದಾನೆ, ಸೇನಾಧಿಕಾರಿ ಈಗಾಗಲೇ ಮದುವೆಯಾಗಿದ್ದು, ಮದುವೆಯಾಗುವಂತೆ ನೇಪಾಳಿ ಮಹಿಳೆಯಿಂದ ಒತ್ತಡ ಎದುರಿಸುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ.