ಉನ್ನತ ನ್ಯಾಯಾಂಗದ ನ್ಯಾಯಾಧೀಶರ ನೇಮಕಾತಿಯಲ್ಲಿ ವಿಳಂಬ
ಹೊಸದಿಲ್ಲಿ: ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೊಲೀಜಿಯಮ್ ಮಾಡಿರುವ ಶಿಫಾರಸುಗಳನ್ನು ಕೇಂದ್ರ ಸರಕಾರವು ವಿಳಂಬಿಸುತ್ತಿದೆ ಎಂದು ಆರೋಪಿಸುವ ಅರ್ಜಿ ಸೇರಿದಂತೆ ಎರಡು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಕೊಲೀಜಿಯಮ್ ವ್ಯವಸ್ಥೆಯು ಹಿಂದೆ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರದ ನಡುವೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ದುಲಿಯ ಅವರನ್ನೊಳಗೊಂಡ ನ್ಯಾಯಪೀಠವು ಈ ಎರಡು ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 9ರಂದು ನಡೆಸಲಿದೆ.
ಸೆಪ್ಟಂಬರ್ 26ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು, ನ್ಯಾಯಾಧೀಶರ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ನಿರಾಶೆ ವ್ಯಕ್ತಪಡಿಸಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ನಿಮ್ಮ ಪ್ರಭಾವವನ್ನು ಬಳಸುವಂತೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿಯನ್ನು ಕೇಳಿತ್ತು.
‘‘ಕಳೆದ ವಾರದವರೆಗೆ 80 ಶಿಫಾರಸುಗಳು ಬಾಕಿಯಾಗಿದ್ದವು. ಕಳೆದ ವಾರ 10 ಹೆಸರುಗಳನ್ನು ಅಂತಿಮಗೊಳಿಸಲಾಯಿತು. ಈಗ 70 ಹೆಸರುಗಳು ಬಾಕಿಯಿವೆ. ಈ ಪೈಕಿ 26 ಶಿಫಾರಸುಗಳು ನ್ಯಾಯಾಧೀಶರ ವರ್ಗಾವಣೆಗೆ ಸಂಬಂಧಿಸಿದವು, ಏಳು ಶಿಫಾರಸುಗಳು ಪುನರಾವರ್ತಿತ ಶಿಫಾರಸುಗಳಾಗಿದ್ದವು, 9 ಕೊಲೀಜಿಯಮ್ ಗೆ ವಾಪಸ್ ಕಳುಹಿಸದೆ ಬಾಕಿ ಇಟ್ಟ ಶಿಫಾರಸುಗಳು ಮತ್ತು ಒಂದು ಶಿಫಾರಸು ಸೂಕ್ಷ್ಮ ಹೈಕೋರ್ಟ್ ಒಂದರ ಮುಖ್ಯ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದ್ದು’’ ಎಂದು ಪೀಠವು ಹೇಳಿತ್ತು.
ಈ ಎಲ್ಲಾ ಶಿಫಾರಸುಗಳು ಕಳೆದ ವರ್ಷದ ನವೆಂಬರ್ನಿಂದ ಬಾಕಿಯಿವೆ ಎಂದು ಅದು ಹೇಳಿತ್ತು.
ಈ ವಿಷಯದಲ್ಲಿ ಪ್ರತಿಕ್ರಿಯಿಸಲು ಒಂದು ವಾರದ ಸಮಯಾವಕಾಶ ನೀಡುವಂತೆ ಅಟಾರ್ನಿ ಜನರಲ್ ಕೋರಿದ್ದರು.
ಸುಪ್ರೀಂ ಕೋರ್ಟ್ ತನ್ನ 2021ರ ತೀರ್ಪಿನಲ್ಲಿ ನೀಡಿರುವ ಸಮಯ ಮಿತಿಯನ್ನು ಉಲ್ಲಂಘಿಸಿರುವುದಕ್ಕಾಗಿ ಕೇಂದ್ರ ಕಾನೂನು ಸಚಿವಾಲಯದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು.