ಮಣಿಪುರ ಹಿಂಸಾಚಾರದ ಸಿಬಿಐ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಕೆ ವಿಳಂಬ ; ಕಾಯಲು ಸುಪ್ರೀಂ ಕೋರ್ಟ್ ನಿರ್ಧಾರ
ಹೊಸದಿಲ್ಲಿ : ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ನಡೆದಿದೆಯೆನ್ನಲಾದ 11 ಅಪರಾಧ ಪ್ರಕರಣಗಳ ಕುರಿತು ಸಿಬಿಐ ನಡೆಸುತ್ತಿರುವ ತನಿಖೆಯ ಸ್ಥಿತಿಗತಿ ವರದಿಯನ್ನು ಕೋರುವುದಕ್ಕೆ ಇನ್ನೂ ಸ್ವಲ್ಪ ಸಮಯ ಕಾಯಲು ಭಾರತದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಶುಕ್ರವಾರ ನಿರ್ಧರಿಸಿದ್ದಾರೆ.
ಮಣಿಪುರ ಹಿಂಸಾಚಾರದಲ್ಲಿ ಮಹಿಳೆಯರು ಹಾಗೂ ಮಕ್ಕಳ ವಿರುದ್ಧದ 11 ಅಪರಾಧ ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಮೇಲ್ವಿಚಾರಣೆಗಾಗಿ ಸುಪ್ರೀಂಕೋರ್ಟ್ ಮಹಾರಾಷ್ಟ್ರದ ಮಾಜಿ ಪೊಲೀಸ್ ಮಹಾನಿರ್ದೇಶಕ ದತ್ತಾತ್ರೇಯ ಪಡ್ಸಾಲ್‌ಗಿಕರ್ ಅವರನ್ನು ಆಗಸ್ಟ್ 7ರಂದು ನೇಮಿಸಿತ್ತು. ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆಯೂ ಅವರಿಗೆ ಸೂಚಿಸಿತ್ತು.
ಸಿಬಿಐ ತನಿಖೆಯ ಜೊತೆಗೆ, ಮೇ ಹಾಗೂ ಜುಲೈನಲ್ಲಿ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿ 6500ಕ್ಕೂ ಅಧಿಕ ಎಫ್‌ಐಆರ್‌ಗಳು ದಾಖಲಾಗಿದ್ದು, ಅವುಗಳ ತನಿಖೆಯನ್ನು ಮಣಿಪುರ ಪೊಲೀಸರು ನಡೆಸುತ್ತಿದ್ದಾರೆ. ಮಣಿಪುರ ಗಲಭೆಗೆ ಸಂಬಂಧಿಸಿ ರಾಜ್ಯ ಸರಕಾರವು ನಡೆಸುತ್ತಿರುವ ಪ್ರಕರಣಗಳ ತನಿಖೆಗಳ ಮೇಲ್ವಿಚಾರಣೆಯನ್ನು ಕೂಡಾ ನೋಡಿಕೊಳ್ಳುವಂತೆಯೂ ಸರ್ವೋಚ್ಚ ನ್ಯಾಯಾಲಯವು ಪಡ್ಸಾಲ್‌ಗಿಕರ್‌ಅವರಿಗೆ ಸೂಚಿಸಿತ್ತು.
ಸಿಬಿಐ ನಡೆಸುತ್ತಿರುವ 11 ಎಫ್‌ಐಆರ್‌ಗಳ ತನಿಖೆಯ ಬಗ್ಗೆ ಈವರೆಗೆ ಯಾವುದೇ ತಾಜಾ ಮಾಹಿತಿ ಈವರೆಗೆ ಲಭ್ಯವಾಗಿಲ್ಲವೆಂದು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ನ್ಯಾಯಾಲಯದ ಗಮನಸೆಳೆದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್ ಅವರು ಪಡ್ಸಾಲ್‌ಗಿಕರ್ ಅವರು ಈಗಾಗಲೇ ಮಣಿಪುರಕ್ಕೆ ಭೇಟಿ ನೀಡಿದ್ದಾರೆಂದು ತಿಳಿಸಿದರು. ‘‘ ಅವರೊಬ್ಬ ಅರೆಕಾಲಿಕ ಅಧಿಕಾರಿ. ಅವರು ಈಶಾನ್ಯ ಭಾರತದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅಧಿಕಾರವಹಿಸಿಕೊಳ್ಳಲು ಅವರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ನೀಡಲಾಗುವುದು ಹಾಗೂ ಆನಂತರ ನಾವು ಅವರಿಂದ ತನಿಖೆಯ ಸ್ಥಿತಿಗತಿವರದಿಯನ್ನು ಕೇಳಲಿದ್ದೇವೆ’’ ಎಂದರು.
ಬಳಿಕ ಭಾರತದ ಅಟಾರ್ನಿ ಜನರಲ್ ವೆಂಕಟರಮಣಿ ಅವರು ಒಂದು ಸಣ್ಣ ಕಿಡಿ,ದೊಡ್ಡ ಮಟ್ಟದ ಜ್ವಾಲೆಯನ್ನು ಭುಗಿಲೆಬ್ಬಿಸುವಂತಹ ಪರಿಸ್ಥಿತಿಯಿದೆ ಎಂದು ಹೇಳಿದರು. ಆನಂತರ ಮಣಿಪುರ ಸರಕಾರದ ಪರ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹಿಂಸಾಚಾರದ ಸಂದರ್ಭದಲ್ಲಿ ಕಳವಾದ ಅಥವಾ ನಾಪತ್ತೆಯಾದ ಶಸ್ತ್ರಾಸ್ತ್ರಗಳ ಕುರಿತಾದ ಗೌಪ್ಯ ಸ್ಥಿತಿಗತಿ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಹಸ್ತಾಂತರಿಸಿದರು. ಶಸ್ತ್ರಾಸ್ತ್ರಗಳ ಕುರಿತ ವರದಿಯು ಅತ್ಯಂತ ಸಂವೇದನಕಾರಿಯಾಗಿರುವುದರಿಂದ ಅವುಗಳನ್ನು ಗೌಪ್ಯತೆಯಿಂದ ಸ್ವೀಕರಿಸಲು ನ್ಯಾಯಾಲಯವು ಸಮ್ಮತಿಸಿತು. ಈ ವರದಿಯು ಜನರಲ್ಲಿ ಭೀತಿಯನ್ನು ಸೃಷ್ಟಿಸುವ ಸಾಧ್ಯತೆಯಿರುವುದರಿಂದ ಅದನ್ನು ಬಹಿರಂಗಪಡಿಸದಂತೆಯೂ ಮಣಿಪುರ ಸರಕಾರವು ವಾದಿಸಿತ್ತು. ವರದಿಯನ್ನು ತಾನು ಪರಿಶೀಲಿಸುವುದಾಗಿ ತಿಳಿಸಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿತು.