ಅಶೋಕ್ ಸ್ವೈನ್ ಒಸಿಐ ಕಾರ್ಡ್ ರದ್ದು ವಿಚಾರ: ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ನೋಟಿಸ್
ಹೊಸದಿಲ್ಲಿ: ಸ್ವೀಡನ್‌ನ ಉಪ್ಪ್ಸಲ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಅಶೋಕ್ ಸ್ವೈನ್ ತಮ್ಮ ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ (ಒಸಿಐ) ಕಾರ್ಡ್ ಅನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ದಿಲ್ಲಿ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ನಾಲ್ಕು ವಾರಗಳೊಳಗೆ ನೋಟಿಸಿಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್, ಮುಂದಿನ ವಿಚಾರಣೆಯನ್ನು ನವೆಂಬರ್ ತಿಂಗಳಿಗೆ ನಿಗದಿಪಡಿಸಿದ್ದಾರೆ.
ಸ್ವೈನ್ ಅವರ ಒಸಿಐ ಕಾರ್ಡ್ ಅನ್ನು ರದ್ದುಪಡಿಸಿರುವುದು ಇದು ಎಡನೇ ಬಾರಿ. ಮೊದಲ ಬಾರಿ ಅದನ್ನು ಫೆಬ್ರವರಿಯಲ್ಲಿ ಸರ್ಕಾರ ರದ್ದುಗೊಳಿಸಿದಾಗ ಆ ಆದೇಶವನ್ನು ದಿಲ್ಲಿ ಹೈಕೋರ್ಟ್ ಬದಿಗೆ ಸರಿಸಿತ್ತು.
ಜುಲೈ ತಿಂಗಳಿನಲ್ಲಿ ನಡೆದ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ್ದ ಜಸ್ಟಿಸ್ ಪ್ರಸಾದ್ “ಇದು ಆದೇಶವೇನೂ ಅಲ್ಲ. ಯಾವುದೇ ಕಾರಣಗಳಿಲ್ಲ, ಯಾವುದೇ ವಿವೇಚನೆ ಬಳಸಿದಂತಿಲ್ಲ.” ಎಂದಿದ್ದರು.
ಜುಲೈ 30ರಂದು ಕೇಂದ್ರ ಮತ್ತೆ ಸ್ವೈನ್ ಅವರ ಒಸಿಐ ಕಾರ್ಡ್ ರದ್ದುಗೊಳಿಸಿತ್ತು. ಸ್ವೈನ್ ಅವರು “ಭಾರತ-ವಿರೋಧಿ” ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ಧಾರೆ ಎಂಬುದಕ್ಕೆ ಸರ್ಕಾರ ಯಾವುದೇ ನಿದರ್ಶನ ನೀಡಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. “ತಾನು ಶಿಕ್ಷಣ ತಜ್ಞ, ತನ್ನ ಅಭಿಪ್ರಾಯಗಳು ಸರ್ಕಾರದ ವಿರುದ್ಧವಾಗಿದ್ದರೂ ಅದಕ್ಕಾಗಿ ತಮ್ಮನ್ನು ಗುರಿಯಾಗಿಸಬಾರದು” ಎಂದು ಅವರು ಹೇಳಿದ್ಧಾರೆ.
ತಮ್ಮ ವಯಸ್ಸಾದ ತಾಯಿ ಭಾರತದಲ್ಲಿದ್ದು ಅವರನ್ನು ಮೂರು ವರ್ಷಗಳಿಂದ ಭೇಟಿಯಾಗಲು ಸಾಧ್ಯವಾಗಿಲ್ಲ. ತಮ್ಮ ತಾಯಿಗೆ ತಾನು ಒಬ್ಬನೇ ಮಗ ಎಂದೂ ಸ್ವೈನ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.