ದಿಲ್ಲಿ ಜಲಮಂಡಳಿ ಕಚೇರಿಗೆ ನುಗ್ಗಿ ಬಿಜೆಪಿ ಕಾರ್ಯಕರ್ತರ ದಾಂಧಲೆ
ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಜಲಕ್ಷಾಮ ಉಂಟಾಗಿರುವ ಮಧ್ಯೆ, ರವಿವಾರ ಬಿಜೆಪಿ ಕಾರ್ಯಕರ್ತರ ಗುಂಪೊಂದು ಛತ್ತರ್‌ಪುರ ಪ್ರದೇಶದಲ್ಲಿರುವ ದಿಲ್ಲಿ ಜಲ ಮಂಡಳಿಯ ಕಚೇರಿಗೆ ನುಗ್ಗಿ, ದಾಂಧಲೆ ನಡೆಸಿದ್ದಾರೆ.
ದಿಲ್ಲಿ ಜಲಮಂಡಳಿ ಕಚೇರಿಯಲ್ಲಿ ತನ್ನ ಪಕ್ಷದ ಕಾರ್ಯರ್ತರ ದಾಂಧಲೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರಮೇಶ್ ಬಿಧೂರಿ ಅವರು ಒಂದು ವೇಳೆ ರೊಚ್ಚಿಗೆದ್ದರೆ ಜನರು ಏನೂ ಬೇಕಾದರೂ ಮಾಡಿಯಾರು ಎಂದು ಹೇಳಿದ್ದಾರೆ.
ಆದರೆ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲವೆಂದು ಹೇಳಿರುವ ಅವರು, ಸಾರ್ವಜನಿಕ ಸೊತ್ತನ್ನು ಧ್ವಂಸಗೊಳಿಸಬಾರದೆಂದು ಜನತೆಗೆ ಮನವಿ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತರ ದಾಳಿಯಿಂದ ಹಾನಿಗೀಡಾಗಿರುವ ದಿಲ್ಲಿ ಜಲನಿಗಮದ ಕಚೇರಿಯ ವೀಡಿಯೊವನ್ನು ಸಾಮಾಜಿಕ ಜಾಣದಲ್ಲಿ ದಿಲ್ಲಿ ಆರೋಗ್ಯ ಸಚಿವ ಸೌರಭ್ ಭಾರದ್ವಜ್ ಪೋಸ್ಟ್ ಮಾಡಿದ್ದು, ವಿವಿಧ ಸ್ಥಳಗಳಲ್ಲಿ ನೀರಿನ ಪೈಪ್‌ಲೈನ್‌ಗಳನ್ನು ಒಡೆದು ಹಾಕಿದವರು ಯಾರು? ಇದು ಯಾರ ಸಂಚು? ಎಂದು ಪ್ರಶ್ನಿಸಿದ್ದಾರೆ.
*ದಿಲ್ಲಿಯಲ್ಲಿ ನೀರಿನ ಪೈಪ್‌ಲೈನ್‌ಗಳನ್ನು ಒಡೆದುಹಾಕಿದ ದುಷ್ಕರ್ಮಿಗಳಿಂದ ನೀರು ಪೂರೈಕೆ ಅಡ್ಡಿಪಡಿಸಲು ಸಂಚು: ಆಪ್ ಆರೋಪ
ದಿಲ್ಲಿಯಲ್ಲಿ ನೀರು ಪೂರೈಕೆಗೆ ಅಡ್ಡಿಪಡಿಸಲು ಸಂಚು ನಡೆಯುತ್ತಿದೆಯೆಂದು ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಆಪಾದಿಸಿದೆ. ಜಲಕ್ಷಾಮವನ್ನು ಎದುರಿಸುತ್ತಿರುವ ಈ ಪರಿಸ್ಥಿತಿಯಲ್ಲಿ ದಿಲ್ಲಿಯ ನಿವಾಸಿಗಳಿಗೆ ಇನ್ನಷ್ಟು ತೊಂದರೆ ನೀಡಲು ನೀರಿನ ಪೈಪ್‌ಲೈನ್‌ಗಳನ್ನು ಒಡೆದುಹಾಕುವ ಸಂಚು ನಡೆಯುತ್ತಿದೆ ಎಂದು ದಿಲ್ಲಿ ಸಚಿವೆ ಅತಿಶಿ ಹೇಳಿದ್ದಾರೆ.
ದಿಲ್ಲಿ ಜಲ ಮಂಡಳಿಯ ತಂಡಗಳು ನೀರಿನ ಪೈಪ್‌ಲೈನ್‌ಗಳ ಕಾವಲು ನಡೆಸುತ್ತಿದ್ದು, ಶನಿವಾರ ದಕ್ಷಿಣ ದಿಲ್ಲಿಯ ಸೋನಿಯಾ ವಿಹಾರ್‌ನ ಮುಖ್ಯ ಪೈಪ್‌ಲೈನ್‌ನಲ್ಲಿ ನೀರು ಸೋರುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.ಪೈಪ್‌ಲೈನ್‌ನಿಂದ ದೊಡ್ಡ ಬೋಲ್ಟ್‌ಗಳನ್ನು ಕತ್ತರಿಸಿ, ಕಿತ್ತುಹಾಕಿರುವುದು ಪತ್ತೆಯಾಗಿತ್ತು ಎಂದು ಸಚಿವೆ ತಿಳಿಸಿದ್ದಾರೆ.
ಈ ಬಗ್ಗೆ ಅತಿಶಿಯವರು ದಿಲ್ಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ನೀರಿನ ಪೈಪ್‌ಲೈನ್‌ಗಳಿಗೆ ರಕ್ಷಣೆಯನ್ನು ಒದಗಿಸಬೇಕೆಂದು ಮನವಿ ಮಾಡಿದ್ದಾರೆ.