ದಿಲ್ಲಿ: ಪಟಾಕಿ ನಿಷೇಧದಲ್ಲಿ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಣೆ
ಹೊಸದಿಲ್ಲಿ: ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹ, ಮಾರಾಟ ಮತ್ತು ಸುಡುವುದನ್ನು ನಿಷೇಧಿಸಲು ದೀಪಾವಳಿಗೆ ಮುನ್ನ ದಿಲ್ಲಿ ಸರಕಾರ ತೆಗೆದುಕೊಂಡಿರುವ ನಿರ್ಧಾರದಲ್ಲಿ ಹಸ್ತಕ್ಷೇಪ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಹಸಿರು ಪಟಾಕಿಗಳ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕೆಂದು ಕೋರಿ ಪಟಾಕಿ ತಯಾರಕರ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಎಮ್.ಎಮ್. ಸುಂದರೇಶ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗ ಪೀಠ ಈ ತೀರ್ಪು ನೀಡಿದೆ.
ಅದೇ ವೇಳೆ, ಹಸಿರು (ಪರಿಸರ ಸ್ನೇಹಿ) ಪಟಾಕಿಗಳಲ್ಲಿ ಬೇರಿಯಮ್ ಬಳಸಲು ಅನುಮತಿ ನೀಡುವಂತೆ ಕೋರುವ ಮನವಿಯನ್ನೂ ಅದು ತಿರಸ್ಕರಿಸಿದೆ.
ದೀಪಾವಳಿ ಬಳಿಕ, ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟವು ‘‘ಅತ್ಯಂತ ಕಳಪೆ’’ ಅಥವಾ ‘‘ತೀವ್ರ’’ ವರ್ಗಕ್ಕೆ ಕುಸಿಯುತ್ತದೆ. ಯಾಕೆಂದರೆ ಪಟಾಕಿಗಳಿಂದ ಹೊರಸೂಸುವ ಮಾಲಿನ್ಯವು ಪರಿಸರಕ್ಕೆ ‘ಪಿಎಮ್ ೨.೫’ ಕಣಗಳು ಮತ್ತು ಬೇರಿಯಮ್, ಸ್ಟ್ರೋನಿಯಮ್ ಮತ್ತು ಅಲ್ಯೂಮಿನಿಯಮ್ ಮುಂತಾದ ಭಾರ ಲೋಹಗಳನ್ನು ಬಿಡುಗಡೆ ಮಾಡುತ್ತದೆ. ಇವುಗಳನ್ನು ಸೇವಿಸಿದರೆ ಕೆಮ್ಮು, ಉಬ್ಬಸ, ಎದೆ ಬಿಗಿತ ಮತ್ತು ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳುತ್ತಾರೆ.
ಈ ಹಿನ್ನೆಲೆಯಲ್ಲಿ, ವಾಯು ಮಾಲಿನ್ಯದ ಬೆದರಿಕೆಯನ್ನು ಹೋಗಲಾಡಿಸಲು ದಿಲ್ಲಿ ಸರಕಾರವು 2021ರಲ್ಲಿ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸಿತ್ತು. ಅಪಾಯಕಾರಿ ಮಾಲಿನ್ಯಗಳನ್ನು ಕಡಿಮೆಗೊಳಿಸುತ್ತವೆ ಮತ್ತು ಲಿತಿಯಮ್, ಆರ್ಸೆನಿಕ್, ಬೇರಿಯಮ್ ಮತ್ತು ಸೀಸ ಮುಂತಾದ ಅಪಾಯಕಾರಿ ಪದಾರ್ಥಗಳನ್ನು ಒಳಗೊಂಡಿಲ್ಲ ಎಂದು ಭಾವಿಸಲಾಗಿರುವ ಹಸಿರು ಪಟಾಕಿಗಳ ಮೇಲೂ ನಿಷೇಧ ವಿಧಿಸಲಾಗಿತ್ತು.
ಚಳಿಗಾಲದಲ್ಲಿ ವಾಯು ಮಾಲಿನ್ಯ ಮಟ್ಟವನ್ನು ನಿಯಂತ್ರಣದಲ್ಲಿಡುವ ಯೋಜನೆಯ ಭಾಗವಾಗಿ, ರಾಷ್ಟ್ರ ರಾಜಧಾನಿ ವಲಯದಲ್ಲಿ ಪಟಾಕಿಗಳ ಉತ್ಪಾದನೆ, ಮಾರಾಟ, ಸಂಗ್ರಹ ಮತ್ತು ಬಳಕೆಯ ಮೇಲೆ ತಾನು ಮರು ನಿಷೇಧ ಹೇರುವುದಾಗಿ ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರವು ಸೆಪ್ಟಂಬರ್ 11ರಂದು ಘೋಷಿಸಿತ್ತು.