ಇವಿಎಂ, ವಿವಿ-ಪ್ಯಾಟ್ ಕುರಿತು ಮಾಹಿತಿ ನಿರಾಕರಣೆ | EC ನಡೆಗೆ ಮಾಹಿತಿ ಆಯೋಗ ಅಸಮಾಧಾನ
ಹೊಸದಿಲ್ಲಿ : ಚುನಾವಣೆಗಳ ಸಂದರ್ಭ ಇವಿಎಂಗಳು ಹಾಗೂ ವಿವಿ-ಪ್ಯಾಟ್ ಗಳ ವಿಶ್ವಾಸಾರ್ಹತೆ ವಿಷಯದ ಕುರಿತು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಮಾಹಿತಿ ನೀಡದ ಕೇಂದ್ರ ಚುನಾವಣಾ ಆಯೋಗದ ಬಗ್ಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇವಿಎಂ ಹಾಗೂ ವಿವಿ-ಪ್ಯಾಟ್ಗಳ ವಿಶ್ವಾಸಾರ್ಹತೆ ಕುರಿತ ಪ್ರಶ್ನಿಸಿ ಹಲವು ಮಂದಿ ಗಣ್ಯ ನಾಗರಿಕರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾಗಿತ್ತು.
ಆರ್ಟಿಐ ಅರ್ಜಿಗೆ ಮಾಹಿತಿ ನೀಡದೇ ಇರುವುದು ಕಾನೂನಿನ ‘ಸಮಗ್ರ ಉಲ್ಲಂಘನೆ’ ಎಂದು ವ್ಯಾಖ್ಯಾನಿಸಿರುವ ಕೇಂದ್ರ ಮಾಹಿತಿ ಆಯೋಗ, ಲಿಖಿತ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.
ಇವಿಎಂಗಳು, ವಿವಿ-ಪ್ಯಾಟ್ಗಳು ಹಾಗೂ ಮತ ಎಣಿಕೆ ಪ್ರಕ್ರಿಯೆಗಳ ವಿಶ್ವಾಸಾರ್ಹತೆ ಪ್ರಶ್ನಿಸಿ ಮನವಿ ಸಲ್ಲಿಸಿದವರಲ್ಲಿ ಒಬ್ಬರಾಗಿರುವ ಮಾಜಿ ಐಎಎಸ್ ಅಧಿಕಾರಿ ಎಂ.ಜಿ. ದೇವಸಹಾಯಂ ಅವರು ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಆರ್ಟಿಐ ಕಾಯ್ದೆ ಅಡಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು 2022 ಮೇ 2ರಂದು ಚುನಾವಣಾ ಆಯೋಗಕ್ಕೆ ರವಾನಿಸಲಾಗಿತ್ತು.
2022 ನವೆಂಬರ್ 22ರಂದು ಸಲ್ಲಿಸಲಾದ ಆರ್ಟಿಐ ಅರ್ಜಿಯ ಮೂಲಕ ದೇವಸಹಾಯಂ ಅವರು ಅರ್ಜಿಯನ್ನು ಯಾವ ವ್ಯಕ್ತಿ ಹಾಗೂ ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ, ಈ ವಿಷಯದ ಕುರಿತಂತೆ ಆಯೋಜಿಸಲಾದ ಯಾವುದೇ ಸಭೆಯ ವಿವರ ಹಾಗೂ ದಾಖಲೆಗಳ ಕುರಿತು ತಿಳಿಯ ಬಯಸುವುದಾಗಿ ಹೇಳಿದ್ದರು.
ಕಡ್ಡಾಯ 30 ದಿನಗಳ ಅವಧಿಯ ಒಳಗೆ ಅವರಿಗೆ ಚುನಾವಣಾ ಆಯೋಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ದೇವಸಹಾಯಂ ಅವರು ಹಿರಿಯ ಅಧಿಕಾರಿಗೆ ಮೊದಲ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಈ ಮೇಲ್ಮನವಿಯನ್ನು ಕೂಡ ಅವರು ಪರಿಶೀಲಿಸಲಿಲ್ಲ.
ಚುನಾವಣಾ ಆಯೋಗ ಯಾವುದೇ ಮಾಹಿತಿ ನೀಡಿಲ್ಲ ಎಂದು ಉಲ್ಲೇಖಿಸಿ ದೇವಸಹಾಯಂ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ಎರಡನೇ ಅರ್ಜಿ ಸಲ್ಲಿಸಿದ್ದರು.