ಲೋಕಸಭಾ ಚುನಾವಣೆಗೆ ದೇಶಾದ್ಯಂತ ಬಿರುಸಿನ ಪ್ರಚಾರ ನಡೆಸಿದರೂ ಸಂಘರ್ಷ ಪೀಡಿತ ಮಣಿಪುರಕ್ಕೆ ಒಮ್ಮೆಯೂ ಭೇಟಿ ನೀಡದ ಪ್ರಧಾನಿ ಮೋದಿ

Update: 2024-06-01 10:33 GMT

Photo: X/@narendramodi

ಹೊಸದಿಲ್ಲಿ: ಮಾ.16ರಂದು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ರ್‍ಯಾಲಿಗಳು ಮತ್ತು ರೋಡ್‌ಶೋಗಳು ಸೇರಿದಂತೆ ಒಟ್ಟು 206 ಜನಸಂಪರ್ಕ ಕಾರ್ಯಕ್ರಮಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡಿಲ್ಲ. ಈಶಾನ್ಯ ಭಾರತದ ನಾಗಾಲ್ಯಾಂಡ್, ಮಿಜೋರಮ್, ಮೇಘಾಲಯ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿಯೂ ಯಾವುದೇ ರಾಜಕೀಯ ರ್ಯಾಲಿಯನ್ನು ಅವರು ನಡೆಸಲಿಲ್ಲ.

ಮೊದಲ ಹಂತದ ಚುನಾವಣೆಗಳಿಗಾಗಿ ಎ.17ರಂದು ಮೋದಿ ನಲ್ಬಾರಿ (ಅಸ್ಸಾಂ) ಮತ್ತು ಅಗರ್ತಲಾ (ತ್ರಿಪುರಾ)ಗಳಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ್ದರು. ಇವೆರಡೂ ಬಿಜೆಪಿ ಆಡಳಿತವಿರುವ ರಾಜ್ಯಗಳಾಗಿವೆ. ಆದರೆ ಚುನಾವಣೆ ಘೋಷಣೆಗೆ ಮುನ್ನ ಮಾ.9ರಂದು ಅವರು ಅರುಣಾಚಲ ಪ್ರದೇಶದ ಇಟಾ ನಗರದಲ್ಲಿ ರೋಡ್‌ಶೋದಲ್ಲಿ ಪಾಲ್ಗೊಂಡಿದ್ದರು.

ಈಶಾನ್ಯದಲ್ಲಿ ಅಸ್ಸಾಂ ಮತ್ತು ತ್ರಿಪುರಾದ ಜೊತೆಗೆ ಅರುಣಾಚಲ ಪ್ರದೇಶ ಮತ್ತು ಮಣಿಪುರಗಳಲ್ಲಿಯೂ ಬಿಜೆಪಿ ಸರಕಾರಗಳಿವೆ. ಎಂಟು ಈಶಾನ್ಯ ರಾಜ್ಯಗಳ ಒಟ್ಟು 25 ಲೋಕಸಭಾ ಸ್ಥಾನಗಳ ಪೈಕಿ ಅಸ್ಸಾಮಿನ ಐದು,ಮಣಿಪುರ,ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳ ತಲಾ ಎರಡು,ನಾಗಾಲ್ಯಾಂಡ್,ಸಿಕ್ಕಿಂ,ಮಿಜೋರಮ್ ಮತ್ತು ತ್ರಿಪುರಾದ ತಲಾ ಒಂದು;ಹೀಗೆ 15 ಸ್ಥಾನಗಳಿಗೆ ಎ.19ರಂದು ಮತದಾನ ನಡೆದಿತ್ತು.

ಬಿಜೆಪಿ ಅಧಿಕಾರದಲ್ಲಿರುವ ಈಶಾನ್ಯದ ನಾಲ್ಕು ರಾಜ್ಯಗಳಲ್ಲದೆ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲಿ ಅದು ಆಡಳಿತ ಮೈತ್ರಿಕೂಟಗಳ ಭಾಗವಾಗಿದೆ. 2019ರಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಸ್ಸಾಮ್‌ನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಯಾವುದೇ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿರಲಿಲ್ಲ, ಆದರೂ ಆಗ ಎನ್‌ಡಿಎ 25 ಲೋಕಸಭಾ ಸ್ಥಾನಗಳ ಪೈಕಿ 19ನ್ನು ಗೆದ್ದಿತ್ತು. ಹಾಲಿ ಚುನಾವಣೆಯಲ್ಲಿ ಅವು ಮೈತ್ರಿಕೂಟದ ಪಾಲುದಾರರಾಗಿ ಸ್ಪರ್ಧಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News