ಭಾರತದಲ್ಲಿನ ಎಲ್ಲ ಬ್ರ್ಯಾಂಡ್‌ಗಳ ಸಕ್ಕರೆ, ಉಪ್ಪಿನಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶ ಪತ್ತೆ: ಅಧ್ಯಯನ ವರದಿ
ಹೊಸದಿಲ್ಲಿ: ಭಾರತದಲ್ಲಿರುವ ಎಲ್ಲ ದೊಡ್ಡ ಮತ್ತು ಸಣ್ಣ ಬ್ರ್ಯಾಂಡ್‌ಗಳ ಸಕ್ಕರೆ ಮತ್ತು ಉಪ್ಪಿನಲ್ಲಿ (ಪ್ಯಾಕೇಜ್ ಮಾಡಿದ ಅಥವಾ ಮಾಡದ) ಮೈಕ್ರೋಪ್ಲಾಸ್ಟಿಕ್ ಅಂಶಗಳಿವೆ ಎಂದು ಮಂಗಳವಾರ ಪ್ರಕಟಗೊಂಡ ಅಧ್ಯಯನ ವರದಿಯೊಂದು ತಿಳಿಸಿದೆ.
ಪರಿಸರ ಸಂಶೋಧನಾ ಸಂಸ್ಥೆ ಟಾಕ್ಸಿಕ್ಸ್ ಲಿಂಕ್ ನಡೆಸಿದ “ಮೈಕ್ರೋಪ್ಲಾಸ್ಟಿಕ್ಸ್ ಇನ್ ಸಾಲ್ಟ್ ಎಂಡ್ ಶುಗರ್” ಎಂಬ ಅಧ್ಯಯನದ ಭಾಗವಾಗಿ ಟೇಬಲ್ ಸಾಲ್ಟ್, ರಾಕ್ ಸಾಲ್ಟ್, ಸೀ ಸಾಲ್ಟ್ ಮತ್ತು ಸ್ಥಳೀಯ ಉಪ್ಪು ಹೀಗೆ 10 ವಿಧದ ಉಪ್ಪುಗಳನ್ನು ಮತ್ತು ಐದು ವಿಧದ ಸಕ್ಕರೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಗೆ ಒಳಪಡಿಸಿದ ಉಪ್ಪು ಮತ್ತು ಸಕ್ಕರೆಯನ್ನು ಆನ್‌ಲೈನ್ ಮತ್ತು ಸ್ಥಳೀಯ ಮಾರುಕಟ್ಟೆಗಳಿಂದ ಸಂಗ್ರಹಿಸಲಾಗಿತ್ತು.
ಆದರೆ ಎಲ್ಲಾ ಸಕ್ಕರೆ ಮತ್ತು ಉಪ್ಪಿನ ಮಾದರಿಗಳಲ್ಲಿ ಫೈಬರ್, ಪೆಲ್ಲೆಟ್, ಫಿಲ್ಮ್ಸ್ ಮತ್ತು ಫ್ರ್ಯಾಗ್‌ಮೆಂಟ್ ಹೀಗೆ ವಿವಿಧ ರೀತಿಯಲ್ಲಿ ಮೈಕ್ರೀಪ್ಲಾಸ್ಟಿಕ್ ಅಂಶಗಳು 0.1 ಎಂಎಂ ನಿಂದ 5 ಎಂಎಂ ತನಕ ಪತ್ತೆಯಾಗಿದ್ದವು.
ಗರಿಷ್ಠ ಪ್ರಮಾಣದ ಮೈಕ್ರೋಪ್ಲಾಸ್ಟಿಕ್ ಅಂಶಗಳು ಐಯೊಡೈಸ್ಡ್ ಉಪ್ಪಿನಲ್ಲಿ ವಿವಿಧ ಬಣ್ಣದ ತೆಳು ಫೈಬರ್ ಮತ್ತು ಫಿಲ್ಮ್‌ಗಳ ರೂಪದಲ್ಲಿ ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.
ಮೈಕ್ರೋಪ್ಲಾಸ್ಟಿಕ್‌ಗಳ ಕುರಿತು ವೈಜ್ಞಾನಿಕ ಡೇಟಾಬೇಸ್ ರಚಿಸಲು ಮತ್ತು ಈ ಸಮಸ್ಯೆಯನ್ನು ಉತ್ತಮವಾಗಿ ಪರಿಹರಿಸಲು ಕ್ರಮಕೈಗೊಳ್ಳುವಂತಾಗಲು ಈ ಅಧ್ಯಯನ ನಡೆಸಲಾಗಿದೆ ಎಂದು ಟಾಕ್ಸಿಕ್ಸ್ ಲಿಂಕ್ ಸ್ಥಾಪಕ ನಿರ್ದೇಶಕ ರವಿ ಅಗರ್ವಾಲ್ ಹೇಳಿದ್ದಾರೆ.