ಕುವೈತ್‌ ಅಗ್ನಿ ದುರಂತದಲ್ಲಿ ತನ್ನ ಏಕೈಕ ಆಧಾರಸ್ಥಂಭ ಮೃತಪಟ್ಟರೇ?

Update: 2024-06-13 05:22 GMT

Photo: NDtv

ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ವಯ್ಯಂಕರ ಗ್ರಾಮದ ಕುಟುಂಬವೊಂದು ಕುವೈತ್‌ ಕಟ್ಟಡ ಅಗ್ನಿ ಅನಾಹುತದಲ್ಲಿ ತನ್ನ ಏಕೈಕ ಆಧಾರಸ್ಥಂಭ ಶಮೀರ್‌ ನಿಧನರಾಗಿದ್ದಾರೆಂಬ ಮಾಹಿತಿಯನ್ನು ಅನಧಿಕೃತ ಮೂಲಗಳಿಂದ ಪಡೆದಿದೆಯಾದರೂ, ಈ ಸುದ್ದಿ ನಿಜವಾಗದೇ ಇರಲಿ ಎಂದು ಪ್ರಾರ್ಥಿಸುತ್ತಿದೆ.

ಕಳೆದ ಕೆಲ ವರ್ಷಗಳಿಂದ ಶಮೀರ್‌ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದರು. ಬುಧವಾರ ಮುಂಜಾನೆ ಕುಟುಂಬಕ್ಕೆ ಸ್ನೇಹಿತರೊಬ್ಬರು ಮಾಹಿತಿ ನೀಡಿ ಶಮೀರ್‌ ಈ ಅಗ್ನಿ ದುರಂತದಲ್ಲಿ ಮೃತರಾಗಿದ್ದಾರೆಂದು ತಿಳಿಸಿದ್ದಾರೆ.

ಆದರೆ ಈ ಕುರಿತಂತೆ ಕುಟುಂಬಕ್ಕೆ ಭಾರತೀಯ ದೂತಾವಾಸ ಅಥವಾ ಶಮೀರ್‌ ಕೆಲಸ ಮಾಡುತ್ತಿದ್ದ ಕಂಪನಿಯಿಂದ ಯಾವುದೇ ಮಾಹಿತಿ ದೊರಕಿಲ್ಲ. ಈ ದುರಂತದಲ್ಲಿ ಗಾಯಗೊಂಡ ಶಮೀರ್‌ ಸಹೋದ್ಯೋಗಿಯ ಕುಟುಂಬದಿಂದ ಮಾಹಿತಿ ದೊರಕಿತು ಎಂದು ಶಮೀರ್‌ ಕುಟುಂಬ ಸದಸ್ಯರು ಹೇಳುತ್ತಾರೆ.

ಶಮೀರ್‌ ಕುರಿತು ಮಾಹಿತಿಗಾಗಿ ಸ್ಥಳೀಯ ರಾಜಕೀಯ ಮುಖಂಡರು ಮುಂದಾಗಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರಿಗೆ ಪತ್ರ ಬರೆದು ಕೇಂದ್ರದ ಸಹಾಯ ಕೋರಿದ್ದಾರೆ. ಈ ದುರಂತದಲ್ಲಿ ಹಲವು ಕೇರಳಿಗರು ಮೃತಪಟ್ಟಿರುವ ಶಂಕೆಯಿದೆ.

ಕುವೈತ್‌ನ ಅಲ್ಅಹಮದಿ ಗವರ್ನರೇಟ್‌ನ ಅಲ್-ಮಂಗಲ್‌ ಕಟ್ಟಡದಲ್ಲಿ ಈ ಅಗ್ನಿ ದುರಂತ ಸಂಭವಿಸಿತ್ತು. ನಿರ್ಮಾಣ ಸಂಸ್ಥೆ ಎನ್‌ಬಿಟಿಸಿ ಗ್ರೂಪ್‌ ಈ ಕಟ್ಟಡವನ್ನು 195ಕ್ಕೂ ಹೆಚ್ಚು ಕಾರ್ಮಿಕರ ವಾಸಕ್ಕೆ ಬಾಡಿಗೆಗೆ ನೀಡಿತ್ತು. ಈ ಕಟ್ಟಡದಲ್ಲಿದ್ದವರು ಹೆಚ್ಚಿನವರು ಭಾರತೀಯರಾಗಿದ್ದಾರೆಂದು ಕುವೈತ್‌ ಮಾಧ್ಯಮಗಳು ವರದಿ ಮಾಡಿವೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News