ಲೋಕಸಭೆ ಚುನಾವಣೆಯಲ್ಲಿ ನೀರಸ ಪ್ರದರ್ಶನ: ರಾಜಸ್ಥಾನ ಬಿಜೆಪಿಯಲ್ಲಿ ಬೇಗುದಿ

Update: 2024-06-22 09:37 GMT

ಸಾಂದರ್ಭಿಕ ಚಿತ್ರ

ಜೈಪುರ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ 25 ಲೋಕಸಭಾ ಕ್ಷೇತ್ರಗಳ ಪೈಕಿ 11 ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡ ಬೆನ್ನಲ್ಲೇ, ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಆಂತರಿಕ ಕಚ್ಚಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಕ್ಷದ ಮುಖಂಡರ ಹಲವು ನಿರ್ಧಾರಗಳನ್ನು ಇತರ ನಾಯಕರು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದು, ಪ್ರಮುಖ ಪದಾಧಿಕಾರಿಗಳನ್ನು ಮೂಲೆಗುಂಪು ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲ ಮುಖಂಡರು ಟಿಕೆಟ್ ಹಂಚಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರೆ, ನಾಯಕತ್ವದ ಕೊರತೆ ಮತ್ತು ಪಕ್ಷದ ಚಟುವಟಿಕೆಗಳ ಮೇಲೆ ನಿಗಾ ಇಡದಿರುವುದು ಸೋಲಿಗೆ ಪ್ರಮುಖ ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳನ್ನು ಗೆದ್ದಿತ್ತು. ಇದು 2019ರಲ್ಲಿ ಗಳಿಸಿದ್ದ ಸ್ಥಾನಗಳಿಗಿಂತ 10 ಕಡಿಮೆ. ಕಳೆದ ವರ್ಷ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಈ ಬಾರಿ ಎಂಟು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿಪಿಐಎಂ, ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ ಮತ್ತು ಭಾರತ್ ಆದಿವಾಸಿ ಪಕ್ಷಗಳು ತಲಾ ಒಂದು ಸ್ಥಾನಗಳಲ್ಲಿ ಜಯ ಸಾಧಿಸಿವೆ. ರಾಜ್ಯದ ಉತ್ತರ ಹಾಗೂ ಪೂರ್ವಭಾಗದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು.

ಪಕ್ಷದಲ್ಲಿ ಚುನಾವಣೆ ಸಂದರ್ಭದಲ್ಲಿ ಕೂಡಾ ಭಿನ್ನಾಭಿಪ್ರಾಯಗಳು ಕೇಳಿಬಂದಿದ್ದವು ಹಾಗೂ ಗುಂಪುಗಾರಿಕೆ ಎಲ್ಲೆಮೀರಿತ್ತು. ಇದೀಗ ಪಕ್ಷದ ಸಾಧನೆ ಕಳಪೆಯಾಗಿರುವುದು ಈ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಹಲವು ಮಂದಿ ರಾಜ್ಯ ಘಟಕದ ಪದಾಧಿಕಾರಿಗಳನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದಾರೆ.

ಸಿಕಾರ್ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಮಾಜಿ ಸಂಸದ ಸ್ವಾಮಿ ಸುಮೇಧಾನಂದ ಇತ್ತೀಚೆಗೆ ಹೇಳಿಕೆ ನೀಡಿ, ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪಕ್ಷದ ಕಾರ್ಯಕರ್ತರು ವಿಫಲರಾಗಿದ್ದಾರೆ ಎಂದು ದೂರಿದ್ದರು. ಟಿಕೆಟ್ ಹಂಚಿಕೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಚುರು ಕ್ಷೇತ್ರದಿಂದ ಮಾಜಿ ಸಂಸದ ರಾಹುಲ್ ಕಾಸ್ವನ್ ಅವರನ್ನು ಕಣಕ್ಕೆ ಇಳಿಸದಿರುವುದು ಜಾಟ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಕಸ್ವಾನ್ ಬಳಿಕ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News