ಕೌಟುಂಬಿಕ ದೌರ್ಜನ್ಯ ಪೀಡಿತರಿಗೆ ಶೀಘ್ರದಲ್ಲೇ 10 ದಿನಗಳ ಕಾಲ ಸರಕಾರಿ ಕೇಂದ್ರಗಳಲ್ಲಿ ಉಳಿಯುವ ಅವಕಾಶ

Update: 2025-03-06 14:08 IST
ಕೌಟುಂಬಿಕ ದೌರ್ಜನ್ಯ ಪೀಡಿತರಿಗೆ ಶೀಘ್ರದಲ್ಲೇ 10 ದಿನಗಳ ಕಾಲ ಸರಕಾರಿ ಕೇಂದ್ರಗಳಲ್ಲಿ ಉಳಿಯುವ ಅವಕಾಶ
  • whatsapp icon

ಹೊಸದಿಲ್ಲಿ: ಕೌಟುಂಬಿಕ ದೌರ್ಜನ್ಯ ಪೀಡಿತರು ಸರಕಾರದ ಏಕನಿಲ್ದಾಣ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆಯುವ ಅವಧಿಯನ್ನು ಐದು ದಿನಗಳಿಂದ 10 ದಿನಗಳಿಗೆ ದ್ವಿಗುಣಗೊಳಿಸಲು ಕೇಂದ್ರ ಸರಕಾರ ಯೋಜಿಸುತ್ತಿದೆ ಎಂದು ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಹೇಳಿದ್ದಾರೆ.

ಬುಧವಾರ ರಾತ್ರಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ಸಂದರ್ಭಗಳಲ್ಲಿ ಕೌಟುಂಬಿಕ ದೌರ್ಜನ್ಯ ಪೀಡಿತರು 15 ದಿನಗಳವರೆಗೆ ಈ ಕೇಂದ್ರಗಳಲ್ಲಿ ಉಳಿಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳು, ಕುಟುಂಬದೊಳಗೆ ಹಾಗೂ ಉದ್ಯೋಗ ಸ್ಥಳಗಳಲ್ಲಿ ಹಿಂಸೆಗೆ ಗುರಿಯಾಗುವ ಮಹಿಳೆಯರಿಗೆ ನೆರವು ಒದಗಿಸುವ ಉದ್ದೇಶವನ್ನು ಏಕನಿಲ್ದಾಣ ಕೇಂದ್ರಗಳು ಹೊಂದಿವೆ.

ಹಾಲಿ ಶಾಸನದ ಪ್ರಕಾರ, ಹಿಂಸೆಗೆ ಗುರಿಯಾಗುವ ಮಹಿಳೆಯರು (ಎಲ್ಲ ವಯೋಮಾನದ ಹೆಣ್ಣು ಮಕ್ಕಳು ಹಾಗೂ ಎಂಟು ವರ್ಷದವರೆಗಿನ ಗಂಡು ಮಕ್ಕಳನ್ನು ಹೊಂದಿರುವ ಮಹಿಳೆಯರು) ಈ ಏಕನಿಲ್ದಾಣ ಕೇಂದ್ರಗಳಲ್ಲಿ ಗರಿಷ್ಠ ಐದು ದಿನಗಳ ಕಾಲ ತಾತ್ಕಾಲಿಕ ಆಶ್ರಯ ಪಡೆಯಬಹುದಾಗಿದೆ.

ದೀರ್ಘಾವಧಿಯ ಆಶ್ರಯ ಬಯಸುವ ಮಹಿಳೆಯರಿಗೆ ಸರಕಾರ ಅಥವಾ ಸರಕಾರೇತರ ಸಂಸ್ಥೆಗಳು ನಿರ್ವಹಿಸುವ ಅಥವಾ ಅವುಗಳ ಅಂಗ ಸಂಸ್ಥೆಯಾದ ಸ್ವಧಾರ್ ಗ್ರೇಹ್ ನೊಂದಿಗೆ ಏಕನಿಲ್ದಾಣ ಸಂಸ್ಥೆಗಳು ಅಂತಹ ಆಶ್ರಯದ ವ್ಯವಸ್ಥೆ ಮಾಡಲಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News