ಜ.22 ರಂದು ದಯವಿಟ್ಟು ಅಯೋಧ್ಯೆಗೆ ಬರಬೇಡಿ: ಭಕ್ತರಿಗೆ ರಾಮ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮನವಿ

Update: 2023-12-17 06:16 GMT

Photo: PTI

ಅಯೋಧ್ಯೆ/ಹೊಸದಿಲ್ಲಿ: ಜನವರಿ 22ರಂದು ರಾಮ ಮಂದಿರ ಗರ್ಭಗುಡಿಯಲ್ಲಿ ರಾಮ್ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ನಡೆಯಲಿರುವ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ದೊಡ್ಡ ಪ್ರಮಾಣದ ಜನಸಂದಣಿ ಸೇರುವ ನಿರೀಕ್ಷೆ ಇದೆ ಎಂದು ndtv.com ವರದಿ ಮಾಡಿದೆ.

ಹಲವು ವರ್ಷಗಳ ಕನಸು ನನಸಾಗುತ್ತಿರುವುದರಿಂದ ದೇಶದಾದ್ಯಂತ ಇರುವ ಜನರು ಮುಂದಿನ ತಿಂಗಳು ಅಯೋಧ್ಯೆಗೆ ಭೇಟಿ ನೀಡುವ ಯೋಜನೆ ರೂಪಿಸಿಕೊಂಡಿದ್ದಾರೆ. ಆದರೆ, ಅಯೋಧ್ಯೆಯ ರಾಮ ಮಂದಿರದ ಬಳಿ ಜನದಟ್ಟಣೆಯಾಗುವುದನ್ನು ತಡೆಯಲು ಜನರು ಆ ದಿನದಂದು ತಮ್ಮ ತಮ್ಮ ಊರಿನ ಸಣ್ಣದಿರಲಿ ಅಥವಾ ದೊಡ್ಡದಾದ ದೇವಸ್ಥಾನವಿರಲಿ, ಅಲ್ಲಿಗೇ ಭೇಟಿ ನೀಡಬೇಕು ಎಂದು ರಾಮ ಮಂದಿರ ದತ್ತಿ ಕಾರ್ಯದರ್ಶಿ ಚಂಪತ್ ರಾಯ್ ಮನವಿ ಮಾಡಿದ್ದಾರೆ.

"ದಯವಿಟ್ಟು ಅಯೋಧ್ಯೆಗೆ ಬರಬೇಡಿ. ನಿಮ್ಮ ನಿಮ್ಮ ಮನೆಯ ಹತ್ತಿರದ ದೇವಸ್ಥಾನಗಳಲ್ಲಿಯೇ ನೆರೆಯಿರಿ. ನಿಮಗೆ ಅನುಕೂಲಕರವೆನಿಸುವ ದೇವಸ್ಥಾನಗಳಿಗೆ ತೆರಳಿ" ಎಂದು ಅವರು ಜನರಿಗೆ ಕರೆ ನೀಡಿದ್ದಾರೆ.

"ನಾವು ಭಕ್ತಾದಿಗಳಿಗೆ ಮೃಷ್ಟಾನ್ನ ಭೋಜನದ ಖಾತ್ರಿ ನೀಡಲಾರೆವು. ಆದರೆ, ಅವರಿಗೆ ಪ್ರಾಥಮಿಕ ಊಟ ಹಾಗೂ ಹವಾನಿಯಂತ್ರಿತ ಕೊಠಡಿಗಳಲ್ಲದಿದ್ದರೂ ಮಲಗಲು ಜಾಗವನ್ನು ಒದಗಿಸಬಲ್ಲೆವು" ಎಂದು ಅವರು ಭರವಸೆ ನೀಡಿದ್ದಾರೆ.

ಪ್ರಾರ್ಥನಾ ಗೃಹವು ಸಿದ್ಧವಾಗಿದ್ದು, ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಆದರೆ, ದೇವಾಲಯ ಸಂಪೂರ್ಣವಾಗಿ ನಿರ್ಮಾಣವಾಗಲು ಇನ್ನೂ ಒಂದೆರಡು ವರ್ಷ ಹಿಡಿಯಲಿದೆ ಎಂದು ರಾಯ್ ಮಾಹಿತಿ ನೀಡಿದ್ದಾರೆ.

ಸರ್ಕಾರವು 4.40 ಎಕರೆ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಕೇಂದ್ರವನ್ನು ನಿರ್ಮಿಸುವ ಯೋಜನೆ ಹೊಂದಿದ್ದು, ಪ್ರವಾಸೋದ್ಯಮ ಕಚೇರಿ ಸೇರಿದಂತೆ ವಾಣಿಜ್ಯ ಕೇಂದ್ರಗಳು, ಪ್ರಯಾಣಿಕರ ಕೊಠಡಿಗಳು, ಕಲೆ ಮತ್ತು ಕರಕುಶಲ ಕೇಂದ್ರ, ಆಹಾರ ತಾಣಗಳು, ವ್ಯಾಪಾರ ಮಾರುಕಟ್ಟೆ ಹಾಗೂ ವಾಹನ ನಿಲುಗಡೆ ತಾಣಗಳು ಅಯೋಧ್ಯೆಯಲ್ಲಿ ತಲೆ ಎತ್ತಲಿವೆ.

ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನಾ ದಿನವಾದ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದು, ಉತ್ತರ ಪ್ರದೇಶದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News