ಜಿಲ್ಲಾಧಿಕಾರಿಗಳಿಗೆ ಕಿರುಕುಳ ಕೊಡಬೇಡಿ : ಈಡಿಗೆ ಸುಪ್ರೀಂ ಕೋರ್ಟ್ ತಾಕೀತು

Update: 2024-05-07 15:36 GMT

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ, ತನಿಖೆಗೆ ಕರೆಯಲಾಗಿರುವ ತಮಿಳುನಾಡಿನ ಐವರು ಜಿಲ್ಲಾಧಿಕಾರಿಗಳಿಗೆ ಕಿರುಕುಳ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಜಾರಿ ನಿರ್ದೇಶನಾಲಯ(ಈಡಿ)ಕ್ಕೆ ಮೌಖಿಕ ಸೂಚನೆ ನೀಡಿದೆ.

ತಮಿಳುನಾಡು ಸರಕಾರ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿಗಳಾದ ಬೇಲಾ ಎಮ್. ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಈ ನಿರ್ದೇಶನ ನೀಡಿತು. ವೆಲ್ಲೋರ್, ತಿರುಚಿರಾಪಳ್ಳಿ, ಕರೂರ್, ತಂಜಾವೂರು ಮತ್ತು ಅರಿಯಲೂರು ಜಿಲ್ಲಾಧಿಕಾರಿಗಳನ್ನು ಜಾರಿ ನಿರ್ದೇಶನಾಲಯವು ಬೆಳಗ್ಗಿನಿಂದ ಸಂಜೆಯವರೆಗೆ ಕಾಯುವಂತೆ ಮಾಡುತ್ತಿದೆ ಎಂದು ತನ್ನ ಅರ್ಜಿಯಲ್ಲಿ ತಮಿಳುನಾಡು ಸರಕಾರ ಆರೋಪಿಸಿದೆ.

ತಮಿಳುನಾಡಿನ ನದಿಗಳಿಂದ ಮರಳು ತೆಗೆಯುವುದು ಮತ್ತು ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ.

ನವೆಂಬರ್ 28ರಂದು, ಜಿಲ್ಲಾಧಿಕಾರಿಗಳಿಗೆ ನೀಡಿದ್ದ ಸಮನ್ಸ್ಗಳಿಗೆ ಮದರಾಸು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸುಪ್ರೀಂ ಕೋರ್ಟ್ಗೆ ಹೋಗಿತ್ತು. ಸುಪ್ರೀಂ ಕೋರ್ಟ್ ಫೆಬ್ರವರಿ 27ರಂದು ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು ಮತ್ತು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು.

ಜಿಲ್ಲಾಧಿಕಾರಿಗಳು ವಿಚಾರಣೆಗೆ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ ಎಂದು ಸೋಮವಾರ ತಮಿಳುನಾಡು ಸರಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ಗೆ ತಿಳಿಸಿದರು. ಆದರೆ, ಜಾರಿ ನಿರ್ದೇಶನಾಲಯವು ಅವರನ್ನು ಬೆಳಗ್ಗೆ 8 ಗಂಟೆಗೆ ಬರಲು ಹೇಳಿ ಸಂಜೆ 6 ಗಂಟೆಯವರೆಗೆ ಕಾಯಿಸಿತು ಎಂದು ಅವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಜಾರಿ ನಿರ್ದೇಶನಾಲಯವು ಹೀಗೆ ಮಾಡಬಾರದು ಎಂದು ಅದರ ವಕೀಲ ರೊಹೆಬ್ ಹುಸೈನ್ಗೆ ಹೇಳಿತು. ‘‘ಅವರನ್ನು ಅನಗತ್ಯವಾಗಿ ಕೂಡಿ ಹಾಕಬೇಡಿ. ಅವರು ತಮ್ಮ ಜಿಲ್ಲೆಗಳ ಕೆಲಸಗಳನ್ನೂ ನೋಡಿಕೊಳ್ಳಬೇಕು’’ ಎಂದು ನ್ಯಾ. ತ್ರಿವೇದಿ ಹೇಳಿದರು.

‘‘ಅವರಿಗೆ ಅನಗತ್ಯವಾಗಿ ಕಿರುಕುಳ ಕೊಡಬೇಡಿ’’ ಎಂದು ನ್ಯಾ. ಮಿತ್ತಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News