ವರ್ಣಾಶ್ರಮ ವ್ಯವಸ್ಥೆಯನ್ನು ಮರು ಸ್ಥಾಪಿಸಬೇಡಿ : ಧನ್ಕರ್ ಗೆ ಖರ್ಗೆ ತಿರುಗೇಟು

Update: 2024-07-02 15:37 GMT

ಜಗದೀಪ್ ಧನಕರ್ ,  ಮಲ್ಲಿಕಾರ್ಜುನ ಖರ್ಗೆ | PC : PTI 

ಹೊಸದಿಲ್ಲಿ: ಜೈರಾಂ ರಮೇಶ್ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಬಂದು ಕುಳಿತುಕೊಳ್ಳಬೇಕು ಎಂದು ವ್ಯಂಗ್ಯವಾಡಿದ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರಿಗೆ ತಿರುಗೇಟು ನೀಡಿದ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, "ವರ್ಣಾಶ್ರಮ ವ್ಯವಸ್ಥೆಯನ್ನು ಮರು ಸ್ಥಾಪಿಸಬೇಡಿ. ಅದು ಈಗಲೂ ನಿಮ್ಮ ತಲೆಯಲ್ಲಿದೆ. ಹೀಗಾಗಿ ನೀವು ಜೈರಾಮ್ ರಮೇಶ್ ಅವರನ್ನು ತುಂಬಾ ಬುದ್ಧಿವಂತ ಎಂದು ಹೇಳುತ್ತಿದ್ದೀರಿ. ನಾನು ತೀರಾ ಕಪ್ಪಗಿರುವುದರಿಂದ ನಾನು ಬದಲಾಗಬೇಕಿದೆ" ಎಂದು ವಾಗ್ದಾಳಿ ನಡೆಸಿದ ಘಟನೆ ರಾಜ್ಯಸಭೆಯಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಬದಲು ನೀವು ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಬೇಕು ಎಂದು ಜೈರಾಮ್ ರಮೇಶ್‌ಗೆ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ವ್ಯಂಗ್ಯವಾಗಿ ಹೇಳಿದ್ದರಿಂದ ಇಂದೂ ಕೂಡಾ ರಾಜ್ಯಸಭೆಯು ಜಗದೀಪ್ ಧನಕರ್ ಹಾಗೂ ಮಲ್ಲಿಕಾರ್ಜುನ ನಡುವಿನ ಬಿಸಿ ಬಿಸಿ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.

ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಿದ್ದ ಭಾಷಣಕ್ಕೆ ಮಂಡನೆಯಾಗಿದ್ದ ವಂದನಾ ನಿರ್ಣಯದಲ್ಲಿ ಭಾಗವಹಿಸಿ ರಾಜ್ಯಸಭೆಯ ವಿರೋಧ ಪಕ್ಷಗಳ ಉಪ ನಾಯಕ ಪ್ರಮೋದ್ ತಿವಾರಿ ಮಾಡಿದ ಭಾಷಣದ ಕೆಲ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕುವಂತೆ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಸೂಚಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಜೈರಾಮ್ ರಮೇಶ್, ಪ್ರಮೋದ್ ತಿವಾರಿ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಬಲ್ಲರಾದ್ದರಿಂದ, ಅವರ ಹೇಳಿಕೆಗಳನ್ನು ಕಡತದಿಂದ ಕೈಬಿಡಬಾರದು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಅವರ ಮನವಿಗೆ ಪ್ರತಿಕ್ರಿಯಿಸಿದ ಧನಕರ್, ಮಲ್ಲಿಕಾರ್ಜುನ ಖರ್ಗೆ ಬದಲು ನೀವು ವಿರೋಧ ಪಕ್ಷಗಳ ನಾಯಕರಾಗಬೇಕು ಎಂದು ವ್ಯಂಗ್ಯವಾಗಿ ಹೇಳಿದರು.

"ನೀವು ಖರ್ಗೆಯ ಜಾಗದಲ್ಲಿ ಇರಬೇಕು ಎಂದು ನನ್ನ ಭಾವನೆ. ನೀವು ತುಂಬಾ ಬುದ್ಧಿವಂತ, ದೊಡ್ಡವರು ಹಾಗೂ ತುಂಬಾ ಪ್ರತಿಭಾವಂತ. ನೀವು ತಕ್ಷಣವೇ ಖರ್ಗೆ ಆಸನದಲ್ಲಿ ಆಸೀನರಾಗಬೇಕು. ನೀವು ಬಹುತೇಕ ಅವರ ಕೆಲಸ ಮಾಡುತ್ತಿದ್ದೀರಿ" ಎಂದು ಜೈರಾಮ್ ರಮೇಶ್ ಅವರನ್ನು ಧನಕರ್ ಕಿಚಾಯಿಸಿದರು.

ಇದರಿಂದ ವ್ಯಗ್ರಗೊಂಡ ದಲಿತರಾದ ಖರ್ಗೆ, ವರ್ಣಾಶ್ರಮ ವ್ಯವಸ್ಥೆಯನ್ನು ಮರು ಸ್ಥಾಪಿಸಬೇಡಿ ಎಂದು ಧನಕರ್‌ಗೆ ತಿರುಗೇಟು ನೀಡಿದರು.

ಖರ್ಗೆ ಮಾತಿಗೆ ಸ್ಪಷ್ಟೀಕರಣ ನೀಡಿದ ಧನಕರ್, "ನೀವು ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ. ನಾನೇನು ಹೇಳಿದೆ? ನೀವು ಮುಂದಿನ ಸಾಲಿನಲ್ಲಿದ್ದೀರಿ. ನಿಮಗೆ 56 ವರ್ಷಗಳ ರಾಜಕೀಯ ಅನುಭವವಿದೆ. ಆದರೆ, ಎಲ್ಲ ಸಂದರ್ಭಗಳಲ್ಲೂ ಜೈರಾಮ್ ರಮೇಶ್ ಕೆಲವು ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಇಲ್ಲೊಂದು ಸಮಸ್ಯೆ ಇದ್ದು, ನೀವದನ್ನು ಪರಿಹರಿಸಬೇಕಿದೆ" ಎಂದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News