ಚುನಾವಣಾ ಪ್ರಚಾರದ ವೇಳೆ ಪ್ರಧಾನಿಯಿಂದ 421 ಬಾರಿ ‘ಮಂದಿರ-ಮಸೀದಿ’, ‘ವಿಭಜನೆ’ ಕುರಿತು ಮಾತು : ಖರ್ಗೆ
ಹೊಸದಿಲ್ಲಿ : ಜಾತಿ ಹಾಗೂ ಧರ್ಮದ ಆಧಾರದಲ್ಲಿ ಮತ ಯಾಚಿಸಬಾರದು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿರುವ ಹೊರತಾಗಿಯೂ ಚುನಾವಣಾ ಪ್ರಚಾರದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ‘ಮಂದಿರ-ಮಸೀದಿ’ ಹಾಗೂ ದೇಶ ವಿಭಜನೆ ಕುರಿತು 421 ಬಾರಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಯ 7ನೇ ಹಾಗೂ ಅಂತಿಮ ಹಂತದ ಚುನಾವಣಾ ಪ್ರಚಾರದ ಕೊನೆಯ ದಿನವಾದ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕಳೆದ 15 ದಿನಗಳ ಭಾಷಣಗಳಲ್ಲಿ ತನ್ನ (ಮೋದಿ)ಹೆಸರನ್ನು 758 ಬಾರಿ ಹಾಗೂ ಕಾಂಗ್ರೆಸ್ ಹೆಸರನ್ನು 232 ಬಾರಿ ಎತ್ತಿದ್ದಾರೆ. ಆದರೆ, ಅವರು ನಿರುದ್ಯೋಗದ ಕುರಿತು ಮಾತನಾಡಿಲ್ಲ ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸಲಿದೆ. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟ ಎಲ್ಲರನ್ನೂ ಒಳಗೊಂಡ, ರಾಷ್ಟ್ರೀಯವಾದಿ ಸರಕಾರವನ್ನು ನೀಡಲಿದೆ ಎಂದರು.
ಪರ್ಯಾಯ ಸರಕಾರಕ್ಕೆ ಜೂನ್ 4ರಂದು ಜನಾದೇಶ ದೊರೆಯುತ್ತದೆ ಎಂಬ ವಿಶ್ವಾಸವಿದೆ. ಬಿಜೆಪಿ ಸರಕಾರಕ್ಕೆ ಮತ್ತೊಂದು ಅವಕಾಶ ದೊರೆತರೆ, ಅದು ಪ್ರಜಾಪ್ರಭುತ್ಪದ ಅಂತ್ಯ ಎಂದು ಜನ ಕೂಡ ಒಪ್ಪಿದ್ದಾರೆ ಎಂದು ಖರ್ಗೆ ಹೇಳಿದರು.
ರಿಚರ್ಡ್ ಅಟನ್ಬರೊ ಅವರ ಚಲನಚಿತ್ರದ ಬಳಿಕ ಮಹಾತ್ಮಾ ಗಾಂಧಿ ಕುರಿತು ಜಾಗತಿಕ ಅರಿವು ಮೂಡಿತು ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ಅವರು ಮಹಾತ್ಮಾ ಗಾಂಧಿ ಕುರಿತು ಅಧ್ಯಯನ ಮಾಡದೇ ಇರಬಹುದು, ಆದರೆ, ಜಗತ್ತಿನಾದ್ಯಂತದ ಜನರು ಮಹಾತ್ಮಾ ಗಾಂಧಿ ಬಗ್ಗೆ ತಿಳಿದಿದ್ದಾರೆ ಎಂದರು.