ಕರ್ನಾಟಕಕ್ಕೆ ಬರ ಪರಿಹಾರ ನೀಡಲು ಇಸಿ ಅನುಮೋದನೆ, ಕ್ಷಿಪ್ರ ವಿತರಣೆಗೆ ಕ್ರಮ : ಸುಪ್ರಿಂ ಕೋರ್ಟ್ ಗೆ ತಿಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ಕರ್ನಾಟಕಕ್ಕೆ ಬರ ಪರಿಹಾರ ನೀಡಲು ಚುನಾವಣಾ ಆಯೋಗವು ಅನುಮೋದನೆ ನೀಡಿದೆ ಹಾಗೂ ಈ ನಿಟ್ಟಿನಲ್ಲಿ ‘‘ಕ್ಷಿಪ್ರವಾಗಿ’’ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರಕಾರವು ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಕರ್ನಾಟಕಕ್ಕೆ ಬರ ಪರಿಹಾರ ನೀಡಲು ಚುನಾವಣಾ ಆಯೋಗವು ಕೇಂದ್ರ ಸರಕಾರಕ್ಕೆ ಅನುಮೋದನೆ ನೀಡಿದೆ. ಹಾಗಾಗಿ, ಈ ವಿಷಯದಲ್ಲಿ ಇನ್ನು ನ್ಯಾಯಾಲಯದಲ್ಲಿ ಯಾವುದೇ ವಾದ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಹೇಳಿದರು.
‘‘ಬರ ಪರಿಹಾರವನ್ನು ಕ್ಷಿಪ್ರವಾಗಿ ನೀಡಲಾಗುವುದು’’ ಎಂದು ಅವರು ಹೇಳಿದರು. ‘‘ಮುಂದಿನ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಅಥವಾ ಯಾವಾಗ ಬೇಕಾದರೂ ಗೌರವಾನ್ವಿತ ನ್ಯಾಯಾಧೀಶರು ನಿಗದಿಪಡಿಸಬಹುದು’’ ಎಂದರು.
ಕರ್ನಾಟಕವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅಟಾರ್ನಿ ಜನರಲ್ ರ ಭರವಸೆಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ಬರ ನಿರ್ವಹಣೆಗೆ ಕೇಂದ್ರ ಸರಕಾರವು ರಾಜ್ಯಕ್ಕೆ ಯಾವುದೇ ನೆರವು ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ಸರಕಾರವು ಮಾರ್ಚ್ 23ರಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿವೆ ಎಂದು ರಾಜ್ಯ ಸರಕಾರವು ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಬರಪೀಡಿತ 223 ತಾಲೂಕುಗಳ ಪೈಕಿ 196 ತಾಲೂಕುಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಅದು ಹೇಳಿತ್ತು.
ನೀರಿನ ಅಭಾವದಿಂದಾಗಿ ರಾಜ್ಯದಲ್ಲಿ ಸಂಭವಿಸಿದ ಬೆಳೆ ನಾಶದ ಒಟ್ಟು ಮೌಲ್ಯ 35,162.05 ಕೋಟಿ ರೂಪಾಯಿ.
ಬರ ಪರಿಹಾರವಾಗಿ ಕೇಂದ್ರ ಸರಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ 18,171.44 ಕೋಟಿ ರೂಪಾಯಿ ಮೊತ್ತವನ್ನು ನೀಡಬೇಕು ಎಂದು ಕರ್ನಾಟಕದ ಕಾಂಗ್ರೆಸ್ ಸರಕಾರವು ಕೋರಿತ್ತು. ಈ ಪೈಕಿ 4,663.12 ಕೋಟಿ ರೂಪಾಯಿ ಬೆಳೆ ನಾಶಕ್ಕೆ ಪರಿಹಾರವಾದರೆ, ಬರದಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕಾಗಿ 12,577.9 ಕೋಟಿ ರೂಪಾಯಿ ಮೊತ್ತವನ್ನು ಅದು ಕೋರಿದೆ.