ಚುನಾವಣಾ ಬಾಂಡ್: ಬಿಜೆಪಿಯನ್ನು ‘ಭ್ರಷ್ಟ ಜನತಾ ಪಾರ್ಟಿ’ ಎಂದು ಬಣ್ಣಿಸಿದ ಉದ್ಧವ ಠಾಕ್ರೆ
ಹೊಸದಿಲ್ಲಿ : ಚುನಾವಣಾ ಬಾಂಡ್ ಗಳ ವಿಚಾರದಲ್ಲಿ ರವಿವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ (ಯುಬಿಟಿ) ವರಿಷ್ಠ ಉದ್ಧವ ಠಾಕ್ರೆಯವರು ಅದನ್ನು ‘ಭ್ರಷ್ಟ ಜನತಾ ಪಾರ್ಟಿ’ ಎಂದು ಬಣ್ಣಿಸಿದರು. ಬಿಜೆಪಿಯ ನಿಜವಾದ ಮುಖ ಜನತೆಯ ಎದುರು ಬಹಿರಂಗಗೊಂಡಿದೆ ಎಂದು ಅವರು ಹೇಳಿದರು.
ಬಿಜೆಪಿಯ ‘ಮೋದಿ ಕಾ ಪರಿವಾರ ’ ಪ್ರಚಾರ ಅಭಿಯಾನ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧವೂ ದಾಳಿ ನಡೆಸಿದ ಠಾಕ್ರೆ, ‘ಪರಿವಾರ’ವನ್ನು ಹೊಂದಿರುವ ವ್ಯಕ್ತಿ ಅದರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಮೋದಿಯವರಿಗೆ ‘ಪರಿವಾರ’ದ ಅರ್ಥ ತಿಳಿದಿಲ್ಲ ಎಂದು ಕುಟುಕಿದರು.
‘ಕೋವಿಡ್ ಸಮಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ‘ಮೇರಾ ಪರಿವಾರ್ ಮೇರಿ ಝಿಮ್ಮೆದಾರಿ (ನನ್ನ ಕುಟುಂಬ ನನ್ನ ಜವಾಬ್ದಾರಿ ) ಎಂದು ಸಂಕಲ್ಪ ಮಾಡಿದ್ದೆ. ನಿಮ್ಮ ‘ಪರಿವಾರ’ದಲ್ಲಿ ಇರುವುದು ನೀವು ಮತ್ತು ನಿಮ್ಮ ಕುರ್ಚಿ ಮಾತ್ರ’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ ಹೇಳಿದರು. ಚುನಾವಣಾ ಬಾಂಡ್ ಗಳ ವಿವರಗಳು ಬೆಳಕಿಗೆ ಬರುವುದರೊಂದಿಗೆ ಬಿಜೆಪಿಯ ಮುಖವಾಡವು ಕಳಚಿ ಬಿದ್ದಿರುವುದರಿಂದ ಈಗ ಅದರ ಬಳಿ ಯಾವುದೇ ನೈಜ ವಿಷಯಗಳಿಲ್ಲ. ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದೆ. ಅದು ‘ಭ್ರಷ್ಟ ಜನತಾ ಪಾರ್ಟಿ’ಯಾಗಿದೆ. ಅದರ ನಿಜವಾದ ಮುಖವು ಜನರೆದುರು ಬಹಿರಂಗಗೊಂಡಿದೆ ಎಂದರು.
ಈ ಹಿಂದೆ ಬಿಜೆಪಿ ಯಾರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತೋ ಅದೇ ನಾಯಕರನ್ನು ಈಗ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದಕ್ಕಾಗಿ ಬಿಜೆಪಿಯನ್ನು ತರಾಟೆಗೆತ್ತಿಕೊಂಡ ಠಾಕ್ರೆ, ಪ್ರಫುಲ್ ಪಟೇಲ್ ವಿರುದ್ಧ ಆರೋಪಗಳನ್ನು ಮಾಡಿದ್ದವರು ಯಾರು? ಆದರ್ಶ ಹಗರಣ ಕುರಿತು ಆರೋಪಗಳನ್ನು ಮಾಡಿದ್ದವರು ಯಾರು? ಜನಾರ್ಧನ ರೆಡ್ಡಿ ಮತ್ತು ನವೀನ ಜಿಂದಾಲ್ ವಿರುದ್ಧ ಆರೋಪಗಳನ್ನು ಮಾಡಿದ್ದವರು ಯಾರು? ಎಂದು ಪ್ರಶ್ನಿಸಿದರು.
ಅಟಲ್ ಬಿಹಾರಿ ವಾಜಪೇಯಿಯವರ ಬಿಜೆಪಿ ವಿಭಿನ್ನವಾಗಿತ್ತು ಮತ್ತು ತತ್ವಗಳನ್ನು ಆಧರಿಸಿ ಕೆಲಸ ಮಾಡುತ್ತಿತ್ತು. ಈಗಿನ ಬಿಜೆಪಿ ಭ್ರಷ್ಟರ ಜೊತೆಯಲ್ಲಿದೆ ಎಂದು ಅವರು ಆರೋಪಿಸಿದರು.