“ನಾನು ರಜೆಯಲ್ಲಿದ್ದೇನೆ.. Bye” : ವೈರಾಲಾದ ಚುಟುಕು ರಜೆ ಅರ್ಜಿ!
ಹೊಸದಿಲ್ಲಿ : "ಹಾಯ್ ಸಿದ್ಧಾರ್ಥ್, ನಾನು 8ನೇ ನವೆಂಬರ್ 2024 ರಂದು ರಜೆಯಲ್ಲಿದ್ದೇನೆ. Bye" ಎಂದು ನವಪೀಳಿಗೆಯ ಉದ್ಯೋಗಿಯೊಬ್ಬರು ತನ್ನ ಕಂಪೆನಿ ಮುಖ್ಯಸ್ಥರಿಗೆ ಬರೆದ ರಜೆ ಅರ್ಜಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
how my gen z team gets its leaves approved pic.twitter.com/RzmsSZs3ol
— Siddharth Shah (@siddharthshahx) November 5, 2024
ನವ ಪೀಳಿಗೆಯ ಸಂವಹನದ ಮಾದರಿಗಳು, ಉದ್ಯೋಗ ಸ್ಥಳದ ಶಿಷ್ಟಾಚಾರಗಳು ಮತ್ತು ರಜೆ ಅನುಮೋದನೆ ಪ್ರಕ್ರಿಯೆಗಳ ಅಗತ್ಯತೆಯ ಬಗ್ಗೆ ಈ ಚಿಕ್ಕ ರಜೆ ಅರ್ಜಿಯು ಅನೇಕ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ರಜೆ ಅರ್ಜಿಯನ್ನು ಸಿದ್ಧಾರ್ಥ್ ಷಾ ಎಂಬವರು ಹಂಚಿಕೊಂಡಿದ್ದಾರೆ.
ನವ ಪೀಳಿಗೆಯ ಉದ್ಯೋಗಿಯೊಬ್ಬರು ತಾನು ತೆಗೆದುಕೊಳ್ಳಬೇಕಾದ ರಜೆಯ ಕುರಿತು ತನ್ನ ಮುಖ್ಯಸ್ಥರಿಗೆ ತಿಳಿಸುವ ಈ ವೈರಲ್ ಇಮೇಲ್ ಸಾಮಾಜಿಕ ಮಾಧ್ಯಮದಲ್ಲಿ ಕೆಲಸದ ಸ್ಥಳದಲ್ಲಿ ನವಪೀಳಿಗೆಯ ಸಂವಹನ ಶೈಲಿ ಯಾವ ರೀತಿ ಬದಲಾವಣೆಗೊಳ್ಳುತ್ತಿದೆ ಎಂಬುದರ ಕುರಿತು ಬೆಳಕು ಚೆಲ್ಲಿದೆ. ಈ ಮೇಲ್ ರಜೆ ಅರ್ಜಿಯಲ್ಲಿನ ವಾಕ್ಯದ ಸಂಕ್ಷಿಪ್ತತೆ ಮತ್ತು ನೇರ ವಾಕ್ಯ ಶೈಲಿಯು ಸಾಂಪ್ರದಾಯಿಕ ಸಂವಹನಕ್ಕಿಂತ ವಿಭಿನ್ನವಾಗಿದೆ.
ಉದ್ಯೋಗಿಗಳು ರಜೆಗಾಗಿ ವಿನಂತಿಸಬೇಕೇ ಅಥವಾ ವ್ಯವಸ್ಥಾಪಕರಿಗೆ ಸರಳವಾಗಿ ತಿಳಿಸಬೇಕೇ ಎಂಬುದರ ಕುರಿತು ಈಗ ಪ್ರಶ್ನೆ ಎದ್ದಿದೆ. ಈ ಘಟನೆಯು ಆಧುನಿಕ ಕೆಲಸದ ಸ್ಥಳದಲ್ಲಿ ರಜೆ ವಿನಂತಿಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದರ ಕುರಿತು ಮಿಶ್ರ ಅಭಿಪ್ರಾಯಗಳಿಗೆ ನಾಂದಿ ಹಾಡಿದೆ.
ಕೆಲವರು ಇದನ್ನು ಅಶಿಸ್ತು ಎಂದು ಪ್ರತಿಕ್ರಿಯಿಸಿದರೆ ಇನ್ನು ಕೆಲವರು ಈ ಮಿಂಚಂಚೆ ವಾಕ್ಯದ ಕುರಿತು ಸಮರ್ಥಿಸಿಕೊಂಡಿದ್ದಾರೆ. ತಂಡವಾಗಿ ಕೆಲಸ ಮಾಡುವಾಗ ಸಮನ್ವಯತೆ ಸಾಧಿಸಲು ಸರಿಯಾದ ರಜೆಯ ಅನುಮೋದನೆ ಅತ್ಯಗತ್ಯ ಎಂದು ಕೆಲವರು ವಾದಿಸಿದ್ದಾರೆ.