ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ಜಾರಿ ನಿರಾಶಾದಾಯಕ : ಸುಪ್ರೀಂ ಕೋರ್ಟ್

Update: 2024-04-24 15:27 GMT

ಸುಪ್ರೀಂ ಕೋರ್ಟ್ | PC : PTI 

 

ಹೊಸದಿಲ್ಲಿ : ದೇಶದಲ್ಲಿ 2016ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ಜಾರಿಯು ನಿರಾಶಾದಾಯಕವಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ ಹಾಗೂ ಕಾಯ್ದೆಯನ್ನು ಸರಿಯಾಗಿ ಜಾರಿಗೊಳಿಸುವಂತೆ ಅದು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಿದೆ.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯನ್ನು ದೇಶಾದ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯೊಂದರ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವೊಂದು ವಿಚಾರಣೆ ನಡೆಸುತ್ತಿದೆ.

ಅಂಗವೈಕಲ್ಯ ಹೊಂದಿರುವ ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಹೆತ್ತವರು, ವೃತ್ತಿಪರರು ಮತ್ತು ಇತರರನ್ನು ಒಳಗೊಂಡ ಸಂಘಟನೆ ‘ಟುಗೆದರ್ ವೀ ಕ್ಯಾನ್’ನ ಸದಸ್ಯರೊಬ್ಬರು ನ್ಯಾಯಾಲಯಕ್ಕೆ ಈ ವಿಷಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯ ಕಮಿಶನರ್ಗಳ ನೇಮಕಾತಿಗೆ ಸಂಬಂಧಿಸಿದ, ಕಾಯ್ದೆಯ 79ನೇ ಪರಿಚ್ಛೇದವನ್ನು ಆಂಧ್ರಪ್ರದೇಶ, ಛತ್ತೀಸ್ ಗಢ, ಜಾರ್ಖಂಡ್, ಪಂಜಾಬ್, ತ್ರಿಪುರ ಮತ್ತು ಉತ್ತರಪ್ರದೇಶಗಳಲ್ಲಿ ಜಾರಿಗೊಳಿಸಲಾಗಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ಚಂಡೀಗಢದಲ್ಲಿಯೂ ಕಾಯ್ದೆಯನ್ನು ಜಾರಿಗೆ ತರಲಾಗಿಲ್ಲ ಎಂದು ಅದು ಹೇಳಿದೆ.

ರಾಜ್ಯ ಕಮಿಶನರ್ ಗಳನ್ನು ಜೂನ್ 30ರ ವೇಳೆಗೆ ನೇಮಕಗೊಳಿಸುವಂತೆ ಸೋಮವಾರ ನ್ಯಾಯಾಲಯವು ಆಂಧ್ರಪ್ರದೇಶ, ಛತ್ತೀಸ್ ಗಢ, ಉತ್ತರಪ್ರದೇಶ, ಪಂಜಾಬ್, ತ್ರಿಪುರಾ ಮತ್ತು ಚಂಡೀಗಢಗಳ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಲಯವು ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News