ಜೈಲಿನಲ್ಲಿರುವ ಇಂಜಿನಿಯರ್ ರಶೀದ್‌ಗೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಅನುಮತಿ

Update: 2024-07-01 09:29 GMT

ಇಂಜಿನಿಯರ್ ರಶೀದ್ (Photo credit: roshankashmir.net)

ಹೊಸದಿಲ್ಲಿ: ಇಂಜಿನಿಯರ್ ರಶೀದ್ ಎಂದೇ ಖ್ಯಾತರಾಗಿರುವ ಕಾಶ್ಮೀರ ನಾಯಕ ಶೇಖ್ ರಶೀದ್ ಅವರು ಸಂಸದರಾಗಿ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಲು ರಾಷ್ಟ್ರೀಯ ತನಿಖಾ ದಳವು(NIA) ಷರತ್ತುಬದ್ಧ ಅನುಮತಿ ನೀಡಿದೆ. ಈ ಅರ್ಜಿಯ ಕುರಿತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್‌ಜಿತ್ ಸಿಂಗ್ ಮಂಗಳವಾರ ತೀರ್ಪು ನೀಡಲಿದ್ದಾರೆ.

2017ರಲ್ಲಿ ನಡೆದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಗೆ ನಿಧಿ ಒದಗಿಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತರಾಗಿದ್ದ ಬಾರಾಮುಲ್ಲಾ ಸಂಸದ ರಶೀದ್ ಅವರು, ತಾವು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಹಾಗೂ ಸಂಸದೀಯ ವ್ಯವಹಾರಗಳನ್ನು ನಿರ್ವಹಿಸಲು ಮಧ್ಯಂತರ ಜಾಮೀನು ನೀಡಬೇಕು ಇಲ್ಲವೆ ಅದಕ್ಕೆ ಪರ್ಯಾಯವಾಗಿ ಕಸ್ಟಡಿ ಪರೋಲ್ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಜೂನ್ 22ರಂದು ಮುಂದೂಡಿದ್ದ ವಿಶೇಷ ನ್ಯಾಯಾಲಯವು, ಈ ಕುರಿತು ಪ್ರತಿವಾದ ಮಂಡಿಸುವಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಸೂಚಿಸಿತ್ತು.

ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂಬ ಷರತ್ತಿನೊಂದಿಗೆ ರಶೀದ್ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಲ್ಲದೆ ತಮ್ಮೆಲ್ಲ ಕೆಲಸಗಳನ್ನು ರಶೀದ್ ಅವರು ಒಂದೇ ದಿನದಲ್ಲಿ ಮುಗಿಸಿಕೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.

ಭಯೋತ್ಪಾದನೆಗೆ ನಿಧಿ ಒದಗಿಸಿದ ಆರೋಪದಲ್ಲಿ 2019ರಲ್ಲಿ ಯುಎಪಿಎ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿತರಾಗಿರುವ ರಶೀದ್, ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News