ಉತ್ತರ ಪ್ರದೇಶ | ಅತ್ಯಾಚಾರಿಯ ಬಂಧನಕ್ಕೆ ಆಗ್ರಹಿಸಿ ಸಾರ್ವಜನಿಕವಾಗಿ ವಿವಸ್ತ್ರಳಾದ ಇಂಜಿನಿಯರಿಂಗ್ ವಿದ್ಯಾರ್ಥಿನಿ!

Update: 2024-08-28 11:22 GMT

ಆಗ್ರಾ : ತನ್ನ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದರಿಂದ ಬೇಸತ್ತ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ಸಾರ್ವಜನಿಕವಾಗಿ ವಿವಸ್ತ್ರಳಾದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ.

ಇಲ್ಲಿನ ಕೇಂದ್ರೀಯ ವಿವಿಯೊಂದಿಗೆ ಸಂಯೋಜಿತ ಇಂಜಿನಿಯರಿಂಗ್ ಕಾಲೇಜಿನ 20ರ ಹರೆಯದ ವಿದ್ಯಾರ್ಥಿನಿ, ತನ್ನ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಕೊನೆಗೂ ಮಂಗಳವಾರ ಪೋಲಿಸರು ಬಂಧಿಸುವ ಮುನ್ನ ಅದಕ್ಕಾಗಿ 17 ದಿನಗಳವರಗೆ ಕಾಯಬೇಕಾಯಿತು. ಒಂದು ಹಂತದಲ್ಲಿ ವಿದ್ಯಾರ್ಥಿನಿ ತನ್ನ ಹತಾಶೆಯನ್ನು ವ್ಯಕ್ತಪಡಿಸಲು ಸಾರ್ವಜನಿಕವಾಗಿ ವಿವಸ್ತ್ರಗೊಂಡಿದ್ದಳು. ಆಕೆಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳ ಕಾಲ ನಿರೀಕ್ಷಣೆಯಲ್ಲಿರಿಸಲಾಗಿತ್ತು.

ಜಮ್ಮು ಐಐಟಿಯಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿರುವ 22ರ ಹರೆಯದ ವಿದ್ಯಾರ್ಥಿ ಆರೋಪಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

ಆರೋಪಿಯು ಆ.10ರಂದು ಸಂಜೆ ಚಲಿಸುತ್ತಿರುವ ಕಾರಿನಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಎಂದು ಲಕ್ನೋ ಮೂಲದ ವಿದ್ಯಾರ್ಥಿನಿ ಸ್ಥಳೀಯ ಪೋಲಿಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾಳೆ. ಆಕೆಯ ದೂರಿನ ಮೇರೆಗೆ ಆ.11ರಂದು ಎಫ್‌ಐಆರ್ ದಾಖಲಾಗಿದ್ದರೂ ಆರೋಪಿಯನ್ನು ಬಂಧಿಸಲು ಪೋಲಿಸರು ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ. ಅತ್ಯಾಚಾರ ನಡೆದಿತ್ತು ಎನ್ನಲಾದ ಸಮಯದಲ್ಲಿ ಆರೋಪಿಯ ಮೊಬೈಲ್ ಲೊಕೇಷನ್ ಜಮ್ಮುವಿನಲ್ಲಿತ್ತು ಎಂದು ಅವರು ಸಮಜಾಯಿಷಿಯನ್ನು ನೀಡಿದ್ದರು.

ಮುಂದಿನ ಕೆಲವು ದಿನಗಳ ಕಾಲ ಪೋಲಿಸ್ ಠಾಣೆಗಳ ಮೆಟ್ಟಿಲೇರಿದ್ದ ವಿದ್ಯಾರ್ಥಿನಿ ಹಲವಾರು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ತನಗಾದ ಅನ್ಯಾಯ,ನೋವನ್ನು ತೋಡಿಕೊಂಡಿದ್ದಳು. ಆದರೆ ಇದ್ಯಾವುದೂ ಫಲ ನೀಡದಿದ್ದಾಗ ಪ್ರಕರಣದಲ್ಲಿ ಪೋಲಿಸ್ ಕ್ರಮಕ್ಕೆ ಒತ್ತಡ ಹೇರಲು ರವಿವಾರ ಸಾರ್ವಜನಿಕವಾಗಿ ವಿವಸ್ತ್ರಗೊಳ್ಳಲು ಆಕೆ ನಿರ್ಧರಿಸಿದ್ದಳು.

‘ನಾವು ಆರೋಪಿಯನ್ನು ಆಗ್ರಾಕ್ಕೆ ಕರೆಸಿ ವಿಚಾರಣೆ ನಡೆಸಿದ್ದೆವು. ಆತ ಕಳೆದ ಕೆಲವು ತಿಂಗಳುಗಳಿಂದ ವಿದ್ಯಾರ್ಥಿನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದ ಎಂದು ತಿಳಿದ ಬಳಿಕ ಆತನನ್ನು ಬಂಧಿಸಿದ್ದೇವೆ ’ ಎಂದು ಪೋಲಿಸರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಘಾಜಿಪುರ ಮೂಲದ ಆರೋಪಿಯು ಐಐಟಿಗೆ ಸೇರುವ ಮುನ್ನ ಆಗ್ರಾದ ವಿವಿಯಲ್ಲಿ ಬಿಟೆಕ್ ಮುಗಿಸಿದ್ದ.

‘ವಿದ್ಯಾರ್ಥಿನಿ ರವಿವಾರ ಮಧ್ಯಾಹ್ನ ರಸ್ತೆಯಲ್ಲಿ ವಿವಸ್ತ್ರಗೊಂಡಿದ್ದಳು ಮತ್ತು ಪೋಲಿಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಳು. ತಕ್ಷಣ ಅವಳತ್ತ ಧಾವಿಸಿದ ಇಬ್ಬರು ಮಹಿಳೆಯರು ಆಕೆಯ ಶರೀರವನ್ನು ಬಟ್ಟೆಗಳಿಂದ ಮುಚ್ಚಿ ಸಮೀಪದ ಕ್ಲಿನಿಕ್‌ವೊಂದಕ್ಕೆ ಕರೆದೊಯ್ದಿದ್ದರು. ಆಕೆ ಮಾನಸಿಕವಾಗಿ ನೊಂದಿದ್ದಾಳೆ ಎಂದು ನಾವು ಭಾವಿಸಿದ್ದೆವು ಮತ್ತು ಪೋಲಿಸರಿಗೆ ಮಾಹಿತಿ ನೀಡಿದ್ದವು. ಬಳಿಕ ಪೋಲಿಸರು ಆಕೆಯನ್ನು ಮಾನಸಿಕ ಆಸ್ಪತ್ರೆಗೆ ಸಾಗಿಸಿದ್ದರು ’ ಎಂದು ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಸಾಮಾಜಿಕ ಕಾರ್ಯಕರ್ತರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ರವಿವಾರ ಸಂಜೆ ವಿದ್ಯಾರ್ಥಿನಿಯನ್ನು ಇಲ್ಲಿಗೆ ದಾಖಲಿಸಲಾಗಿತ್ತು ಮತ್ತು ಮೂರು ದಿನಗಳ ಕಾಲ ನಿರೀಕ್ಷಣೆಯಲ್ಲಿ ಇರಿಸಲಾಗಿತ್ತು. ಈ ಅವಧಿಯಲ್ಲಿ ಆಕೆಯ ಚಟುವಟಿಕೆಗಳು ಸಹಜವಾಗಿದ್ದವು. ಯಾವುದೇ ಅಸಮಂಜಸತೆ ಕಂಡು ಬಂದಿರಲಿಲ್ಲ. ಮಂಗಳವಾರ ಲಕ್ನೋದಿಂದ ಬಂದಿದ್ದ ತಾಯಿಗೆ ಆಕೆಯನ್ನು ಹಸ್ತಾಂತರಿಸಿದ್ದೇವೆ ಎಂದು ಆಸ್ಪತ್ರೆಯ ನಿರ್ದೇಶಕರು ತಿಳಿಸಿದರು.

ಅತ್ಯಾಚಾರ ದೂರನ್ನು ದಾಖಲಿಸುವ ಮುನ್ನ ಜು.29ರಂದು ವಿದ್ಯಾರ್ಥಿನಿ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಕಿರುಕುಳ ದೂರನ್ನು ದಾಖಲಿಸಿದ್ದಳು ಎಂದು ಪೋಲಿಸರು ತಿಳಿಸಿದರು.

‘ನಾವು ವಿಷಯವನ್ನು ಪರಿಶೀಲಿಸಿದ್ದು, ಆಕೆಯ ಆರೋಪವನ್ನು ಬೆಂಬಲಿಸುವ ಯಾವುದೇ ಪುರಾವೆ ಕಂಡುಬಂದಿರಲಿಲ್ಲ” ಠಾಣಾಧಿಕಾರಿ ಹೇಳಿದ್ದಾರೆ.

ಸೌಜನ್ಯ : indianexpress.com

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News