"ಇಂಗ್ಲೆಂಡ್ ನ ತೆರಿಗೆ, ಆಫ್ರಿಕಾದ ಸವಲತ್ತು": ರಾಜ್ಯಸಭೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಪಟ್ಟಿ ಹೇಳಿದ ರಾಘವ್ ಛಡ್ಡಾ
ನೀವು ಇಂಗ್ಲೆಂಡ್ ನವರ ಹಾಗೆ ತೆರಿಗೆ ವಿಧಿಸುತ್ತೀರಿ, ಆದರೆ ಸೊಮಾಲಿಯಾದ ಹಾಗೆ ಜನರಿಗೆ ಸೌಲಭ್ಯ ಒದಗಿಸುತ್ತೀರಿ...ಬೆಲೆ ಏರಿಕೆಯ ಗ್ರಾಫ್ ಮೇಲೆ ಹೋಗ್ತಾ ಇದ್ದ ಹಾಗೇ ಬಿಜೆಪಿಯ ರಾಜಕೀಯ ಗ್ರಾಫ್ ಕೆಳಗೆ ಬರುತ್ತಾ ಇರುತ್ತೆ ಎಂದು ರಾಜ್ಯಸಭೆಯಲ್ಲಿ ರಾಘವ್ ಛಡ್ಡಾ ಅವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯ ಸಭಾ ಸಂಸದ ರಾಘವ್ ಛಡ್ಡ ಗುರುವಾರ ಸಂಸತ್ತಿನಲ್ಲಿ ಬಿಜೆಪಿ ಸರಕಾರದ ಆರ್ಥಿಕ ನೀತಿಯ ಹರಿಹಾಯ್ದಿದ್ದಾರೆ.
ವೃತ್ತಿಯಲ್ಲಿ ಸಿಎ ಆಗಿರುವ ರಾಘವ್ ಛಡ್ಡಾ ಆಪ್ ನ ಉದಯೋನ್ಮುಖ ನಾಯಕ. ಪಕ್ಷದೊಳಗೆ ಪ್ರಭಾವಿಯಾಗಿ ಬೆಳೆಯುತ್ತಿರುವಾಗಲೇ ಲೋಕಸಭಾ ಚುನಾವಣೆ ಹೊತ್ತಿಗೆ ಪಕ್ಷದೊಂದಿಗೆ ನಿಲ್ಲದೆ ನಾಪತ್ತೆಯಾಗಿದ್ದರು ಎಂಬ ವದಂತಿ ಹರಡಿತ್ತು. ಬಳಿಕ ಅವರು ಕಣ್ಣಿನ ತುರ್ತು ಶಸ್ತ್ರ ಚಿಕಿತ್ಸೆಗಾಗಿ ಲಂಡನ್ ಗೆ ಹೋಗಲೇಬೇಕಾಗಿತ್ತು ಎಂದು ಪಕ್ಷದ ಸ್ಪಷ್ಟೀಕರಣ ಬಂದಿತ್ತು.
ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನ ರಾಜ್ಯಸಭೆ ಸಂಸದರಾಗಿ ಆಯ್ಕೆಯಾಗಿರುವ ರಾಘವ್ ಛಡ್ಡಾ ಬಜೆಟ್ ನ ಮುಖ್ಯಾಂಶಗಳನ್ನು ಹೇಳುತ್ತಲೇ ಬಿಜೆಪಿಯನ್ನು ಮತ್ತು ಅವರ ಆರ್ಥಿಕ ನೀತಿ ಹಾಗು ಅದರ ಸಮಸ್ಯೆಗಳನ್ನು ಒಂದೊಂದಾಗಿ ತೆರೆದಿಡುತ್ತಾ ಹೋದರು. ಸಾಮಾನ್ಯವಾಗಿ ಬಜೆಟ್ ಬಂದಾಗ ದೇಶದಲ್ಲಿ ಕೆಲವು ವಿಭಾಗಗಳು ಸಂತುಷ್ಟರಾದರೆ ಇನ್ನು ಕೆಲವು ವಿಭಾಗಗಳು ಅಸಮಾಧಾನಗೊಳ್ಳುತ್ತವೆ. ಆದರೆ ಈ ಬಾರಿ ಅಂತೂ ಬಿಜೆಪಿ ಸರಕಾರ ಎಲ್ಲರಲ್ಲೂ ನಿರಾಶೆ ಮೂಡಿಸಿದೆ ಎಂದು ರಾಘವ್ ಹೇಳಿದ್ದಾರೆ.
ಎಷ್ಟರಮಟ್ಟಿಗೆ ಅಂದರೆ ಬಿಜೆಪಿಯ ಕಟ್ಟಾ ಮತದಾರರೇ ಈ ಬಜೆಟ್ ನಿಂದಾಗಿ ಅಸಂತುಷ್ಟರಾಗಿದ್ದಾರೆ ಎಂದು ರಾಘವ್ ಛಡ್ಡಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸರಕಾರವು ಜನರ ರಕ್ತ ಕಡಿಯುವ ಕೆಲಸ ಮಾಡ್ತಾ ಇದೆ. ವ್ಯಕ್ತಿಯೊಬ್ಬನು 10 ರೂಪಾಯಿ ಸಂಪಾದಿಸುತ್ತಾನೆ ಎಂದಾದರೆ ಮೂರು ಮೂರುವರೆ ರೂಪಾಯಿಯಷ್ಟು ಆದಾಯ ತೆರಿಗೆ, ಇನ್ನು ಎರಡುವರೆ ರೂಪಾಯಿ ಜಿಎಸ್ಟಿ, ಇನ್ನು ಇದಲ್ಲದೆ ಬೇರೆ ಬೇರೆ ರೀತಿಯ ತೆರಿಗೆಗಳು. ಇದೆಲ್ಲಾ ಪಾವತಿಸಿದ ನಂತರ ಜನರ ಬಳಿ ಏನೂ ಉಳಿಯುವುದಿಲ್ಲ ಎಂದು ರಾಘವ್ ಛಡ್ಡಾ ಸಂಸತ್ತಿನಲ್ಲಿ ಗುಡುಗಿದರು.
ದೇಶದ ಸರಕಾರ ಜನರಿಗೆ ಒದಗಿಸುತ್ತಿರುವ ಸೇವೆಗಳ ಕುರಿತು ಮಾತನಾಡಿದ ರಾಘವ್, ನಾವು ಇಂಗ್ಲೆಂಡಿನಲ್ಲಿರುವ ಜನರ ತರಹ ತೆರಿಗೆ ಕಟ್ಟುತ್ತೇವೆ, ಆದರೆ ಸೋಮಾಲಿಯಾ ತರಹದ ಪ್ರಗತಿ ನಮ್ಮಲ್ಲಿ ಆಗುತ್ತಿದೆ ಎಂದರು.
2019ರಲ್ಲಿ 303 ಸೀಟ್ ಇದ್ದ ಬಿಜೆಪಿಯ ಮೇಲೆ ಜನರು 18 ಶೇಕಡ ಜಿಎಸ್‌ಟಿ ಹಾಕಿ 240ಕ್ಕೆ ತಲುಪಿಸಿದ್ದಾರೆ ಎಂದು ರಾಘವ್ ವ್ಯಂಗ್ಯವಾಡಿದ್ದಾರೆ.
ದೇಶದ ಈಗಿನ ದುಸ್ಥಿತಿಗೆ ಮೂರು ಕಾರಣಗಳಿವೆ. ಮೊದಲನೇ ಕಾರಣ ಅರ್ಥ ವ್ಯವಸ್ಥೆ ಎರಡನೇ ಕಾರಣವೂ ಅರ್ಥ ವ್ಯವಸ್ಥೆ, ಮೂರನೇಯದೂ ಅರ್ಥ ವ್ಯವಸ್ಥೆಯೇ ಎಂದು ಹೇಳುವ ಮೂಲಕ ಮೋದಿ ಸರಕಾರ ದೇಶದ ಆರ್ಥಿಕತೆಯನ್ನು ಹಳಿ ತಪ್ಪಿಸಿ ಇಡೀ ದೇಶಕ್ಕೆ ಸಮಸ್ಯೆ ತಂದೊಡ್ಡಿದೆ ಎಂದು ರಾಘವ್ ಛಡ್ಡಾ ಹೇಳಿದರು.
ದೇಶದಲ್ಲಿ ರೈತರ ಆದಾಯ ಶತಮಾನಗಳಲ್ಲೇ ದಾಖಲೆ ಕೆಳಮಟ್ಟದಲ್ಲಿ ಇದೆ ಎಂದು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಗ್ರಾಮೀಣ ಜನರ ಆದಾಯ ದಿನಕ್ಕಿಂತ ದಿನ ಕೆಳಗೆನೇ ಹೋಗುತ್ತಾ ಇದೆ ಅಂತ ರಾಘವ್ ಬಿಜೆಪಿ ಸರಕಾರವನ್ನು ತರಾಟೆಗೆತ್ತಿಕೊಂಡರು.
2014ರಲ್ಲಿ ತನ್ನ ಒಂದು ದಿನದ ಸಂಬಳದಲ್ಲಿ 3 ಕೆ.ಜಿ ಬೇಳೆ ಖರೀದಿಸಬಹುದಿದ್ದರೆ ಇದೀಗ 2024ರಲ್ಲಿ ಅವನು ಒಂದು ದಿನದ ಸಂಬಳದಲ್ಲಿ ಕೇವಲ ಒಂದುವರೆ ಕೆಜಿ ಬೇಳೆ ಖರೀದಿಸಬಹುದು ಎಂದು ಹೇಳಿ ರಾಘವ್ ಗ್ರಾಮೀಣ ಜನರ ಸಮಸ್ಯೆಗಳನ್ನು ಸಂಸತ್ತಿನ ಮುಂದೆ ತೆರೆದಿಟ್ಟರು. ಈ ಎಲ್ಲ ಸಮಸ್ಯೆಗಳಿಂದಾಗಿಯೇ ಗ್ರಾಮೀಣ ಭಾರತದಲ್ಲಿ ಬಿಜೆಪಿಯ ವೋಟು ಶೇರಿನಲ್ಲಿ ಐದು ಶೇಕಡ ಕಡಿತ ಉಂಟಾಗಿದೆ ಮತ್ತು ಕೃಷಿ ಸಚಿವ ಚುನಾವಣೆ ಸೋತಿದ್ದಾರೆ ಎಂದು ರಾಘವ್ ನೆನಪಿಸಿದರು.
ಜನರು ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಜೆಪಿಯ ಸೋಲಿಗಿರುವ ಇನ್ನೊಂದು ಕಾರಣ. ನಾವು ದಿನಾ ಬಳಸುವಂತಹ ಎಲ್ಲಾ ವಸ್ತುಗಳಿಗೆ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆ ಹೀಗೆ ಏರುತ್ತಾ ಹೋದಲ್ಲಿ ಬಿಜೆಪಿಯ ರಾಜಕೀಯವೂ ಅಷ್ಟೇ ವೇಗದಲ್ಲಿ ಕೆಳಗೆ ಬರಲಿದೆ ಎಂದು ರಾಘವ್ ಕುಟುಕಿದರು.
ಸಂಘಟಿತ ಕ್ಷೇತ್ರವಾಗಿರಲಿ ಅಸಂಘಟಿತ ಕ್ಷೇತ್ರವಾಗಿರಲಿ, ಬೇರೆಲ್ಲೇ ಆಗಿರಲಿ ಎಲ್ಲಾ ಕಡೆಗಳಲ್ಲೂ ನಿರುದ್ಯೋಗವೇ ಕಾಣುತ್ತಿದೆ. ಇನ್ನು ದೇಶದಲ್ಲಿ ಹೂಡಿಕೆ 25 ವರ್ಷದ ದಾಖಲೆ ಕೆಳಮಟ್ಟದಲ್ಲಿದೆ ಎಂದು ರಾಘವ್ ನೆನಪಿಸಿದರು.
ಕೇವಲ ಟೀಕಿಸುವುದನ್ನು ಬಿಟ್ಟು ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಕನಿಷ್ಠ ಸಂಬಳ ಏರಿಕೆ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಭರವಸೆ ಸೇರಿದಂತೆ ಹತ್ತು ಪ್ರಮುಖ ಸಲಹೆ ನೀಡಿ ರಾಘವ್ ತಮ್ಮ ಭಾಷಣ ಕೊನೆಗೊಳಿಸಿದರು.