ಬೇಹುಗಾರಿಕೆ ಪ್ರಕರಣ: ಸಿಬಿಐಯಿಂದ ಪತ್ರಕರ್ತ, ನೌಕಾ ಪಡೆಯ ಮಾಜಿ ಕಮಾಂಡರ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Update: 2023-07-13 16:15 GMT

Photo : PTI 

ಮುಂಬೈ: ಪತ್ರಕರ್ತ ವಿವೇಕ್ ರಘುವಂಶಿ ಹಾಗೂ ಸೌಕಾ ಪಡೆಯ ಮಾಜಿ ಕಮಾಂಡರ್ ಆಶಿಶ್ ಪಾಠಕ್ ವಿರುದ್ಧ ಬೇಹುಗಾರಿಕೆ ಆರೋಪದಲ್ಲಿ ಸಿಬಿಐ ಬುಧವಾರ ಆರೋಪ ಪಟ್ಟಿ ಸಲ್ಲಿಸಿದೆ. ರಕ್ಷಣೆಗೆ ಸಂಬಂಧಿಸಿದ ಅತಿಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿದ ಹಾಗೂ ಅದನ್ನು ವಿದೇಶಿ ಬೇಹುಗಾರಿಕೆ ಸಂಸ್ಥೆಗಳೊಂದಿಗೆ ಹಂಚಿಕೊಂಡ ಆರೋಪದಲ್ಲಿ ರಘುವಂಶಿ ಹಾಗೂ ಪಾಠಕ್ ಅವರನ್ನು ಸಿಬಿಐ ಮೇಯಲ್ಲಿ ಬಂಧಿಸಿತ್ತು.

ರಘುವಂಶಿ ವಿದೇಶಿ ಮೂಲಗಳಿಂದ 3 ಕೋಟಿ ರೂಪಾಯಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಘುವಂಶಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ಅಭಿವೃದ್ಧಿ ಯೋಜನೆ ಕುರಿತು ಕಾನೂನು ಬಾಹಿರವಾಗಿ ವಿವರಗಳನ್ನು ಸಂಗ್ರಹಿಸುತ್ತಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಈ ವಿವರಗಳಲ್ಲಿ ಭಾರತೀಯ ಶಶಸ್ತ್ರ ಸೇನಾ ಪಡೆಗಳ ಖರೀದಿ, ರಾಷ್ಟ್ರೀಯ ಭದ್ರತೆಯ ಕುರಿತ ವರ್ಗೀಕೃತ ಸಂವಹನ ಹಾಗೂ ಮಿತ್ರ ರಾಷ್ಟ್ರಗಳೊಂದಿಗೆ ಭಾರತದ ಮಾತುಕತೆ ಕುರಿತ ಮಾಹಿತಿ ಸೇರಿದೆ ಎಂದು ಆರೋಪ ಪಟ್ಟಿ ಹೇಳಿದೆ. ಮೇಯಲ್ಲಿ ಸಿಬಿಎ ಆರೋಪಿಗಳಿಗೆ ಸೇರಿದ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್ಸ್, ಮೊಬೈಲ್ ಫೋನ್, ಹಾರ್ಡ್ ಡಿಸ್ಕ್ ಹಾಗೂ ಪೆನ್ ಡ್ರೈವ್ ಸೇರಿದಂತೆ 48 ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿತ್ತು.

ಅಲ್ಲದೆ, ಭಾರತೀಯ ರಕ್ಷಣಾ ಸಂಸ್ಥೆಗಳಿಗೆ ಸಂಬಂಧಿಸಿದ ಹಲವು ಪ್ರಚೋದನಕಾರಿಯಾದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಿಲ್ಲಿ ಪೊಲೀಸ್ ನ ವಿಶೇಷ ಸೆಲ್ ನಲ್ಲಿ ದಾಖಲಿಸಲಾಗಿತ್ತು. ಗೃಹ ಸಚಿವಾಲಯ ಡಿಸೆಂಬರ್ ನಲ್ಲಿ ನಿರ್ದೇಶನ ನೀಡಿದ ಬಳಿಕ ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News