ಎಲ್ಲವೂ ನಾವೆಣಿಸಿದಂತೆ ಆಗುವುದಿಲ್ಲ: ರೋಹಿತ್ ಶರ್ಮ
ಮುಂಬೈ: ಕಳೆದ ಕೆಲವು ತಿಂಗಳುಗಳಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ, ‘‘ಎಲ್ಲವೂ ನಾವೆಣಿಸಿದಂತೆ ಆಗುವುದಿಲ್ಲ’’ ಎಂದು ಗುರುವಾರ ಹೇಳಿದ್ದಾರೆ.
ಈ ಅವಧಿಯಲ್ಲಿ ಅವರು ಮುಖ್ಯವಾಗಿ ತನ್ನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಮುಂಬೈ ಇಂಡಿಯನ್ಸ್ನ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಆಡಳಿತವು ಅವರ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ನೇಮಿಸಿದೆ. ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪಾಂಡ್ಯರನ್ನು ಮುಂಬರುವ ಟಿ20 ವಿಶ್ವಕಪ್ ತಂಡದ ಉಪನಾಯಕನಾಗಿ ನೇಮಿಸಿದೆ. ರೋಹಿತ್ ಶರ್ಮ ನಾಯಕತ್ವವನ್ನು ಉಳಿಸಿಕೊಂಡಿದ್ದಾರೆ.
ರೋಹಿತ್ ಶರ್ಮರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕೆಳಗಿಳಿಸಿರುವುದು ತಂಡದ ಅಭಿಮಾನಿಗಳಿಗೆ ಸರಿ ಕಂಡಿಲ್ಲ. ಹಾಲಿ ಐಪಿಎಲ್ ಋತುವಿನ ಮೊದಲ ಕೆಲವು ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಹಾರ್ದಿಕ್ರನ್ನು ಅಣಕವಾಡಿದ್ದಾರೆ.
‘‘ಇದು ಬದುಕಿನ ಭಾಗ. ಎಲ್ಲವೂ ನಾವೆಣಿಸಿದಂತೆ ಆಗುವುದಿಲ್ಲ. ಇದರಿಂದ ನಮಗೆ ಅನುಭವ ಸಿಗುತ್ತದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರೋಹಿತ್ ಹೇಳಿದ್ದಾರೆ. ಹಾಲಿ ಐಪಿಎಲ್ನಲ್ಲಿ ಪಾಂಡ್ಯ ನಾಯಕತ್ವದಲ್ಲಿ ಆಡುವ ಅನುಭವ ಹೇಗಿದೆ ಎಂಬ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದ್ದಾರೆ.
‘‘ಮೊದಲು ನಾನು ನಾಯಕನಾಗಿರಲಿಲ್ಲ. ನಾನು ಹಲವು ನಾಯಕರ ಅಡಿಯಲ್ಲಿ ಆಡಿದ್ದೇನೆ. ಇದು ನನಗೆ ಅದಕ್ಕಿಂತ ಭಿನ್ನ ಅಥವಾ ಹೊಸತೇನೂ ಅಲ್ಲ’’ ಎಂದು ರೋಹಿತ್ ನುಡಿದರು.
ರೋಹಿತ್ ಭಾರತಕ್ಕಾಗಿ ಮಹೇಂದ್ರ ಸಿಂಗ್ ಧೋನಿ, ವೀರೇಂದ್ರೆ ಸೆಹವಾಗ್ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಡಿ ಆಡಿದ್ದಾರೆ. ಐಪಿಎಲ್ನಲ್ಲಿ ಅವರು ಆ್ಯಡಮ್ ಗಿಲ್ಕ್ರಿಸ್ಟ್, ಹರ್ಭಜನ್ ಸಿಂಗ್ ಮತ್ತು ರಿಕಿ ಪಾಂಟಿಂಗ್ ಅಡಿಯಲ್ಲೂ ಆಡಿದ್ದಾರೆ.
ಹಿಂದಿನ ಮೂರು ಐಪಿಎಲ್ ಋತುಗಳಲ್ಲಿ ಸಾಕಷ್ಟು ರನ್ ಗಳಿಸಿಲ್ಲ ಎಂಬ ದೂರುಗಳನ್ನು ಅವರು ಎದುರಿಸಿದ್ದರು. ಆದರೆ, ಹಾಲಿ ಋತುವಿನಲ್ಲಿ ಅವರು ಬ್ಯಾಟಿಂಗ್ನಲ್ಲಿ ಉತ್ತಮ ನಿರ್ವಹಣೆ ನೀಡಿದ್ದಾರೆ.
‘‘ಪರಿಸ್ಥಿತಿ ಏನೇ ಇದ್ದರೂ ನಾವು ಅದರ ಪ್ರಕಾರ ನಡೆಯಬೇಕು ಮತ್ತು ಓರ್ವ ಆಟಗಾರನಾಗಿ ನಾವು ಏನು ಮಾಡಬೇಕೋ ಅದನ್ನು ಮಾಡಲು ಪ್ರಯತ್ನಿಸಬೇಕು. ಕಳೆದ ಒಂದು ತಿಂಗಳಿನಲ್ಲಿ ನಾನು ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ’’ ಎಂದರು.
2024ರ ಐಪಿಎಲ್ನಲ್ಲಿ ರೋಹಿತ್ ಶರ್ಮ ಈವರೆಗೆ 10 ಇನಿಂಗ್ಸ್ಗಳಲ್ಲಿ 314 ರನ್ ಗಳಿಸಿದ್ದಾರೆ.