600 ವರ್ಷ ಹಳೆಯ ಮಸೀದಿಯನ್ನು ಧ್ವಂಸಗೊಳಿಸಿದ್ದೇಕೆ ವಿವರಿಸಿ : ಡಿಡಿಎಗೆ ದಿಲ್ಲಿ ಹೈಕೋರ್ಟ್ ಸೂಚನೆ

Update: 2024-02-02 14:12 GMT

Photo: ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಲ್ಲಿನ 600 ವರ್ಷಗಳಷ್ಟು ಹಳೆಯ ಮಸೀದಿಯನ್ನು ನೆಲಸಮಗೊಳಿಸಿದ್ದೇಕೆ ಎನ್ನುವುದನ್ನು ವಿವರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಗುರುವಾರ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ಕ್ಕೆ ಸೂಚಿಸಿದೆ.

ಜ.30ರಂದು ಡಿಡಿಎ ನಗರದ ಮೆಹರೌಲಿ ಪ್ರದೇಶದಲ್ಲಿಯ ಅಖೊಂಡ್ಜಿ ಮಸೀದಿ ಮತ್ತು ಬೆಹ್ರುಲ್ ಉಲೂಮ್ ಮದರಸವನ್ನು ನೆಲಸಮಗೊಳಿಸಿತ್ತು.

ಕೇಂದ್ರ ಸರಕಾರದ ಅಧೀನದ ಡಿಡಿಎ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಗರ ಯೋಜನೆಗಳನ್ನು ರೂಪಿಸುವ ಮತ್ತು ನಿರ್ಮಿಸುವ ಹೊಣೆಯನ್ನು ಹೊತ್ತಿದೆ.

ಮಸೀದಿಯ ಇಮಾಮ್ ಝಾಕಿರ್ ಹುಸೇನ್ ಅವರ ಮನೆಯನ್ನೂ ನೆಲಸಮಗೊಳಿಸಿದ್ದು,ಅವರು ತಮ್ಮ ಕುಟುಂಬದೊಂದಿಗೆ ನಿರಾಶ್ರಿತರಾಗಿದ್ದಾರೆ ಎಂದು ದಿಲ್ಫಿ ವಕ್ಫ್ ಮಂಡಳಿಯ ಆಡಳಿತ ಸಮಿತಿಯು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ತನ್ನ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ದಿಲ್ಲಿ ಸರಕಾರದ ಧಾರ್ಮಿಕ ಸಮಿತಿಯು ಜ.4ರಂದು ಸಲ್ಲಿಸಿದ್ದ ಶಿಫಾರಸುಗಳ ಮೇರೆಗೆ ನೆಲಸಮ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಡಿಡಿಎ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.

ಧಾರ್ಮಿಕ ಸಮಿತಿಯು ತಮ್ಮ ವಾದವನ್ನು ಮಂಡಿಸಲು ದಿಲ್ಲಿ ವಕ್ಫ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಅವಕಾಶವನ್ನು ನೀಡಿತ್ತು, ಆದರೆ ಯಾವುದೇ ನೆಲಸಮಕ್ಕೆ ಆದೇಶಿಸಲು ಧಾರ್ಮಿಕ ಸಮಿತಿಗೆ ಅಧಿಕಾರವಿಲ್ಲ ಎಂದು ವಕ್ಫ್ ಮಂಡಳಿಯು ಪ್ರತಿಪಾದಿಸಿತ್ತು ಎಂದೂ ಡಿಡಿಎ ನ್ಯಾಯಾಲಯಕ್ಕೆ ತಿಳಿಸಿತು.

ಪ್ರದೇಶವನ್ನು ಎಲ್ಲ ರೀತಿಯ ಅತಿಕ್ರಮಣಗಳಿಂದ ಮುಕ್ತಗೊಳಿಸಲು ರಿಡ್ಜ್ ಮ್ಯಾನೇಜ್ಮೆಂಟ್ ಬೋರ್ಡ್ ನಿರ್ಧರಿಸಿದ ಬಳಿಕ ನೆಲಸಮ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಅದು ಹೇಳಿತು.

ಸಂಜಯ ವನದಲ್ಲಿ ಅತಿಕ್ರಮಣಗಳನ್ನು ಪರಿಶೀಲಿಸಲು ದಕ್ಷಿಣ ದಿಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು ಮತ್ತು ಅದು ಪ್ರದೇಶದಲ್ಲಿಯ ವಿವಿಧ ಅಕ್ರಮ ಕಟ್ಟಡಗಳ ತೆರವಿಗೆ ಸೂಚಿಸಿತ್ತು ಎಂದು ಸುದ್ದಿಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ಡಿಡಿಎ ತಿಳಿಸಿದೆ.

ಸಂಜಯ ವನ ದಿಲ್ಲಿಯಲ್ಲಿಯ ನಗರ ಅರಣ್ಯ ಪ್ರದೇಶವಾಗಿದೆ. ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ವಿಷಯಗಳ ಮೇಲ್ವಿಚಾರಣೆಯನ್ನು ಹೊಂದಿರುವ ಧಾರ್ಮಿಕ ಸಮಿತಿಯು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದನ್ನು ಅನುಮೋದಿಸಿತ್ತು ಎಂದೂ ಡಿಡಿಎ ಹೇಳಿಕೆಯಲ್ಲಿ ತಿಳಿಸಿದೆ.

ಮಸೀದಿಯನ್ನು ನೆಲಸಮಗೊಳಿಸಿದ್ದು ಏಕೆ ಮತ್ತು ನೆಲಸಮ ಕಾರ್ಯಾಚರಣೆಗೆ ಮುನ್ನ ಯಾವುದೇ ನೋಟಿಸನ್ನು ನೀಡಲಾಗಿತ್ತೇ ಎನ್ನುವುದನ್ನು ವಿವರಿಸಿ ಉತ್ತರವನ್ನು ಒಂದು ವಾರದಲ್ಲಿ ಸಲ್ಲಿಸುವಂತೆ ಗುರುವಾರ ಉಚ್ಚ ನ್ಯಾಯಾಲಯವು ಡಿಡಿಎಗೆ ಸೂಚಿಸಿತು.

ಮಂಗಳವಾರ ಬೆಳಿಗ್ಗೆ ಐದು ಗಂಟೆಗೆ ಆರಂಭಗೊಂಡಿದ್ದ ನೆಲಸಮ ಕಾರ್ಯಾಚರಣೆ ಸುಮಾರು 12 ಗಂಟೆಗಳ ಕಾಲ ನಡೆದಿತ್ತು ಎಂದು ಮದರಸದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ಬೋಧಿಸುತ್ತಿದ್ದ ಮೆಹರೌಲಿ ನಿವಾಸಿ ಮಝಮಿಲ್ ಸಲ್ಮಾನಿ ಹೇಳಿದರು. ಮದರಸದಲ್ಲಿ ಸುಮಾರು 25 ವಿದ್ಯಾರ್ಥಿಗಳು ದಾಖಲಾಗಿದ್ದರು ಎಂದರು.

ಅವರು ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ. ಪೋಲಿಸರು ಪ್ರದೇಶವನ್ನು ನಿರ್ಬಂಧಿಸಿದ್ದಾರೆ ಮತ್ತು ಯಾರನ್ನೂ ಒಳಗೆ ಬಿಡುತ್ತಿಲ್ಲ. ನಾಲ್ಕು ದಿನಗಳ ಬಳಿಕವೂ ನಿರ್ಬಂಧ ಮುಂದುವರಿದೆ ಎಂದು ಸಲ್ಮಾನಿ ತಿಳಿಸಿದರು.

‘ಡಿಡಿಎ ಅಧಿಕಾರಿಗಳು 13 ಬುಲ್ಡೋಝರ್ ಗಳು ಮತ್ತು ಭಾರೀ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಬಂದಿದ್ದರು. ನಮ್ಮ ಬಟ್ಟೆಗಳನ್ನು ತೆಗೆದುಕೊಳ್ಳಲೂ ಅವರು ನಮಗೆ ಅವಕಾಶ ನೀಡಿರಲಿಲ್ಲ. ಮೊದಲಿಗೆ ಮಸೀದಿಯನ್ನು,ನಂತರ ಮದರಸವನ್ನು ಕೆಡವಿದ ಅವರು ಬಳಿಕ ಖಬರಸ್ತಾನವನ್ನು ಸಮತಟ್ಟುಗೊಳಿಸಿದರು ’ ಎಂದು ಮಸೀದಿ ಇಮಾಮರ ಪತ್ನಿ ಫಹಿಮಾನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News