ಸುಳ್ಳು ಅತ್ಯಾಚಾರ ಆರೋಪ: ಪತಿಗೆ ರೂ. 25 ಸಾವಿರ ದಂಡ ವಿಧಿಸಿದ ಹೈಕೋರ್ಟ್

Update: 2024-01-26 03:19 GMT

Photo: freepik

ಹೊಸದಿಲ್ಲಿ: ತನ್ನ ಪತ್ನಿಯ ಮೇಲೆ ಅತ್ಯಚಾರ ಎಸಗಿದ್ದಾಗಿ ಪತ್ನಿಯ ಸೋದರ ಸಂಬಂಧಿಯೊಬ್ಬನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಲು ಪ್ರಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಈ ಅತ್ಯಾಚಾರ ಆರೋಪವನ್ನು ಪತ್ನಿ ನಿರಾಕರಿಸಿದ್ದಳು.

ಈ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟಾ ಅರ್ಜಿಯನ್ನು ವಜಾಗೊಳಿಸಿದ್ದಾರೆ.

"ಅಪರಾಧ ನ್ಯಾಯವ್ಯವಸ್ಥೆಯ ಚಕ್ರದಲ್ಲಿ ಸುಳ್ಳು ಆರೋಪಗಳಿಗೆ ಅವಕಾಶವಿಲ್ಲ. ಸಂತ್ರಸ್ತೆ ಎನ್ನಲಾದ ಮಹಿಳೆಯೇ ಯಾವುದೇ ಅಹವಾಲು ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಆಕೆಯ ಪರವಾಗಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದು ಪತ್ನಿಗೆ ನೀಡುವ ಕಿರುಕುಳದ ವಿಚಿತ್ರ ರೂಪವಾಗಿದ್ದು, ಇದರಲ್ಲಿ ಅಮಾಯಕ ವ್ಯಕ್ತಿಯೊಬ್ಬನನ್ನು ಸಿಲುಕಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹಾಗೂ ಸೆಷನ್ಸ್ ನ್ಯಾಯಾಲಯ ನೀಡಿದ್ದ ಎರಡು ಆದೇಶಗಳನ್ನು ಪ್ರಶ್ನಿಸಿ ಪತಿ ಈ ಅರ್ಜಿ ಸಲ್ಲಿಸಿದ್ದ. ಅಪರಾಧ ದಂಡಸಂಹಿತೆ ಸೆಕ್ಷನ್ 156 (3)ರ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಪತ್ನಿಯ ಸೋದರ ಸಂಬಂಧಿ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿದ್ದ ಅರ್ಜಿಯನ್ನು ಕೆಳಹಂತದ ನ್ಯಾಯಾಲಯಗಳು ವಜಾಗೊಳಿಸಿದ್ದವು.

ಈ ಪ್ರಕರಣದಲ್ಲಿ ಪೊಲೀಸರು ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಿ ಪತ್ನಿಯಿಂದ ಯಾವುದೇ ಅಹವಾಲು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಹಾಗೂ ಅತ್ಯಾಚಾರದ ಘಟನೆಯನ್ನು ನಿರಾಕರಿಸಿದ್ದಾರೆ ಎಂದು ಹೈಕೋರ್ಟ್ ಉಲ್ಲೇಖಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News