ಘಟಿಕೋತ್ಸವಗಳಲ್ಲಿ ಕಪ್ಪು ನಿಲುವಂಗಿಗೆ ವಿದಾಯ
ಹೊಸದಿಲ್ಲಿ: ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ವಸಾಹತುಶಾಹಿ ಕಾಲದ ಪೋಷಾಕನ್ನು ಕೈಬಿಟ್ಟು ಭಾರತದ ಸಾಂಪ್ರದಾಯಿಕ ಉಡುಪುಗಳನ್ನು ವಸ್ತ್ರಸಂಹಿತೆಯಾಗಿ ಅಳವಡಿಸಿಕೊಳ್ಳಬೇಕೆಂದು ಏಮ್ಸ್ ಹಾಗೂ ಐಎನ್‌ಐಎಸ್ ಸೇರಿದಂತೆ ಕೇಂದ್ರ ಸರಕಾರ ಅಧೀನದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ನಿರ್ದೇಶವನ್ನು ಜಾರಿಗೊಳಿಸಿದೆ.
ವಸಾಹತುಶಾಹಿ ಪರಂಪರೆಗಳನ್ನು ತೊರೆದು ಭಾರತೀಯ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ರೂಪಿಸಿರುವ ‘ಪಂಚ ಪ್ರಾಣ’ ನಿರ್ಣಯಗಳಿಗೆ ಅನುಗುಣವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಘಟಿಕೋತ್ಸವಗಳಲ್ಲಿ ಕಪ್ಪು ನಿಲುವಂಗಿ ಹಾಗೂ ಟೊಪ್ಪಿಗಳನ್ನು ಧರಿಸುವ ಪದ್ಧತಿಯು ಮಧ್ಯಯುಗ ಕಾಲದ ಯುರೋಪ್‌ನಲ್ಲಿ ಹುಟ್ಟಿಕೊಂಡಿತ್ತು ಹಾಗೂ ಅದು ಬ್ರಿಟಿಶ್ ವಸಾಹತುಶಾಹಿ ಕಾಲದಲ್ಲಿ ಭಾರತಕ್ಕೆ ಪರಿಚಯಿಸಲ್ಪಟ್ಟಿತ್ತು. ತಾವಿರುವ ರಾಜ್ಯದ ಸಂಪ್ರದಾಯಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತಹ ನಿಲುವಂಗಿಯನ್ನು ವಿನ್ಯಾಸಗೊಳಿಸುವಂತೆ ಸಚಿವಾಲಯವ ಏಮ್ಸ್/ ಐಎನ್‌ಐಎಸ್ ಸೇರಿದಂತೆ ವಿವಿಧ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.
ನೂತನ ವಸ್ತ್ರಸಂಹಿತೆಯ ಪ್ರಸ್ತಾವನೆಯನ್ನು ಆಯಾ ವೈದ್ಯಕೀಯ ಶಿಕ್ಷಣಸಂಸ್ಥೆಗಳು ಅನುಮೋದನೆಗಾಗಿ ಸಚಿವಾಲಯಕ್ಕೆ ಕಳುಹಿಸಬೇಕೆಂದು ಸರಕಾರವು ತಿಳಿಸಿದೆ.