ರೈತ ಪ್ರತಿಭಟನೆಗಳ ಪರಿಣಾಮ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಗೋಚರಿಸಲಿದೆ : ರೈತ ಸಂಘಟನೆಗಳ ಎಚ್ಚರಿಕೆ

Update: 2024-08-18 17:21 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಭಟನನಿರತ ವಿವಿಧ ರೈತ ಸಂಘಟನೆಗಳು ಆಡಳಿತಾರೂಢ ಬಿಜೆಪಿಯನ್ನು ವಿರೋಧಿಸಲು ನಿರ್ಧರಿಸಿವೆ. ತಮ್ಮ ಸಮಸ್ಯೆಗಳು ಹಾಗೂ ನೆನೆಗುದಿಯಲ್ಲಿರುವ ಬೇಡಿಕೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಸರಣಿ ಮಹಾಪಂಚಾಯತ್‌ ಗಳನ್ನು ಏರ್ಪಡಿಸಲು ಅವು ನಿರ್ಧರಿಸಿವೆ.

ರೈತರ ಪ್ರತಿಭಟನೆಯ ಪರಿಣಾಮವು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವ್ಯಕ್ತವಾಗಿತ್ತು ಎಂದು ಎಸ್‌ ಕೆ ಎಂ (ರಾಜಕೀಯೇತರ) ಸಂಘಟನೆಯ ನಾಯಕ ಅಭಿಮನ್ಯು ಕೋಚಾರ್ ಹೇಳಿದ್ದಾರೆ. ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳ ಜಾರಿ ಹರ್ಯಾಣದ ಗ್ರಾಮಾಂತರ ಪ್ರದೇಶಗಳ ರೈತರ ಪ್ರಮುಖ ಬೇಡಿಕೆಗಳಾಗಿವೆ ಎಂದವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಗ್ನಿವೀರ್ ಯೋಜನೆ ಹಾಗೂ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿನರೇಗಾ) ನಿಧಿಯನ್ನು ಕಡಿಮೆಗೊಳಿಸಿರುವುದು ಕೂಡಾ ಹರ್ಯಾಣದ ಗ್ರಾಮಾಂತರ ಪ್ರದೇಶಗಳ ಜನರ ಪ್ರಮುಖ ಸಮಸ್ಯೆಗಳಾಗಿವೆ ಎಂದವರು ಹೇಳುತ್ತಾರೆ.

‘‘ಪ್ರತಿಭಟನೆಯ ಸಂದರ್ಭದಲ್ಲಿ ರೈತರ ಮೇಲೆ ಎಸಗಲಾದ ಹಿಂಸೆ ಹಾಗೂ ದೌರ್ಜನ್ಯಗಳು ಜನರ ಮನಸ್ಸಿನಲ್ಲಿ ಈಗಲೂ ಹಸಿಯಾಗಿವೆ. ಈ ಚುನಾವಣೆಯಲ್ಲಿ ಅವರು ಬಿಜೆಪಿಗೆ ಪಾಠ ಕಲಿಸಲಿದ್ದಾರೆ’’ ಎಂದು ಕೋಹರ್ ತಿಳಿಸಿದ್ದಾರೆ.

‘‘ರೈತರ ಬೇಡಿಕೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಎಸ್‌ಕೆಎಂಪಿ ಗ್ರಾಮಗ್ರಾಮಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಿದೆ ರೈತರ ಮೇಲೆ ನಡೆದ ದೌರ್ಜನ್ಯಗಳ ವೀಡಿಯೊಗಳನ್ನು ನಾವು ಪ್ರದರ್ಶಿಸಲಿದ್ದೇವೆ. ಇದಕ್ಕಾಗಿ ವೀಡಿಯೊ ವಾಹನವೊಂದನ್ನು ಕೂಡಾ ಆರಂಭಿಸಲಾಗುವುದು.ಎಸ್‌ ಕೆ ಎಂ ಪಿ (ರಾಜಕೀಯೇತರ)ಯು ಸೆಪ್ಟೆಂಬರ್ 15ರಂದು ಜಿಂದ್ ಉಚನಾ ಮಾಂಡಿಯಲ್ಲಿ , ಸೆಪ್ಟೆಂಬರ್ 22ರಂದು ಕುರುಕ್ಷೇತ್ರದ ಪೀಪ್ಲಿಯಲ್ಲಿ ಮಹಾ ಪಂಚಾಯತ್‌ ಗಳನ್ನು ನಡೆಸಲಿದೆ” ಎಂದು ಕೋಹರ್ ತಿಳಿಸಿದ್ದಾರೆ.

ಈಗ ರದ್ದುಗೊಂಡಿರುವ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ 2020-21ರ ಸಾಲಿನಲ್ಲಿ ನಡೆದ ರೈತರ ಪ್ರತಿಭಟನೆಗಳಿಗೆ ಹರ್ಯಾಣವು ಪ್ರಮುಖ ಕೇಂದ್ರವಾಗಿತ್ತು. ಸಂಯುಕ್ತ ಕಿಸಾನ್ ಮೋರ್ಚಾದ ಬ್ಯಾನರ್‌ ನಡಿಯಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆನಂತರ ಈ ಸಂಘಟನೆ ವಿಭಜನೆಗೊಂಡಿದ್ದು, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸ್ಥಾಪನೆಯಾಗಿತ್ತು.

ಭಾರತೀಯ ಕಿಸಾನ್ ಯೂನಿಯನ್‌ನ ಹರ್ಯಾಣ ಘಟಕದ ವರಿಷ್ಠ ಹಾಗೂ ಸಂಯುಕ್ತ ಸಂಘರ್ಷ ಪಕ್ಷದ ಸ್ಥಾಪಕ ಗುರ್ನಾಮ್ ಸಿಂಗ್ ಚಾರುನಿ ಕೂಡಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ರಾಜ್ಯದ ಜನತೆ ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ ಎಂದವರು ಹೇಳಿದರು. ಆದರೆ ತನ್ನ ಸ್ಪರ್ಧೆಯಿಂದ ಬಿಜೆಪಿ ವಿರೋಧಿ ಮತಗಳು ವಿಭಜನೆಗೊಳ್ಳುವ ಸಾಧ್ಯತೆಯನ್ನು ಅವರು ಒಪ್ಪಿಕೊಂಡಿದ್ದಾರೆ.

90 ಮಂದಿಯ ಸದಸ್ಯ ಬಲದ ಹರ್ಯಾಣ ವಿಧಾನಸಭೆಗೆ ಅಕ್ಟೋಬರ್ ಒಂದರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ. ಆಮ್ ಆದ್ಮಿ ಪಕ್ಷ ಕೂಡಾ ಎಲ್ಲಾ 90 ಸ್ಥಾನಗಳಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News